ಬಾಗಲಕೋಟೆ: ಕರ್ನಾಟಕ ಸೇರಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ಮಾಡಲು ಇಟ್ಟುಕೊಂಡಿದ್ದ ಮುಧೋಳ ನಗರದ ವಿವಿಧ ಲಾಡ್ಜಗಳ ಮೇಲೆ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ೧೦ ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದು ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಮೂವರನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಮುಧೋಳ ನಗರದ ಶಿವದುರ್ಗಾ ಲಾಡ್ಜ್, ಸುರಭಿ ಲಾಡ್ಜ್, ಓಂಕಾರ ಲಾಡ್ಜ್, ಸಪ್ತಗಿರಿ ಲಾಡ್ಜ್ಗಳ ಮೇಲೆ ಪೊಲೀಸರು ನಾಲ್ಕು ಪ್ರತ್ಯೇಕ ತಂಡಗಳು ಏಕಕಾಲಕ್ಕೆ ದಾಳಿ ಮಾಡಿವೆ. ಲಾಡ್ಜ್ ಮ್ಯಾನೇಜರ್ ಹಾಗೂ ಮಾಲೀಕರು, ಕರ್ನಾಟಕ, ಪಶ್ಚಿಮ ಬಂಗಾಳ, ಆಸ್ಸಾಂ ಹಾಗೂ ಮಹಾರಾಷ್ಟçದಿಂದ ಮಹಿಳೆಯರನ್ನು ಪ್ರೇರೆಪಿಸಿ ನಗರಕ್ಕೆ ಕರೆತಂದು ವೇಶ್ಯಾವಾಟಿಕೆಗೆ ಇಟ್ಟುಕೊಂಡಿರುವದು ಬೆಳಕಿಗೆ ಬಂದಿದೆ. ೧೦ ಜನ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ೧೧ ಜನರ ವಿರುದ್ದ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಮೂವರನ್ನು ಬಂಧಿಸಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದರು.
ಮುಧೋಳ ನಗರದಲ್ಲಿ ವಿವಿಧ ಲಾಡ್ಜಗಳಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎನ್ನುವ ದೂರುಗಳು ಆಗಾಗ ಕೇಳಿ ಬರುತ್ತಲೇ ಇದ್ದವು ಹೀಗಾಗಿ ಎಸ್ಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ ಮಾರ್ಗದರ್ಶನದಲ್ಲಿ ಜಮಖಂಡಿ ಡಿವೈಎಸ್‌ಪಿ ಶಾಂತವೀರ. ಈ. ,ಮುಧೋಳ ಪಿಎಸ್‌ಐಗಳಾದ ಅಜೀತಕುಮಾರ ಹೊಸಮನಿ, ಕೆ.ಬಿ.ಮಾಂಗ, ಲೋಕಾಪೂರ ಠಾಣೆ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ನೇತೃತ್ವದಲ್ಲಿ ಪ್ರತ್ಯೇಕ ಪೊಲೀಸ ತಂಡಗಳು ನಾಲ್ಕು ಲಾಡ್ಜಗಳ ಮೇಲೆ ದಾಳಿ ನಡೆಸಿವೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಪೂರ ಅವರು ಪ್ರತಿನಿಧಿಸುವ ಮುಧೋಳ ಕ್ಷೇತ್ರದಲ್ಲಿ ವೇಶ್ಯಾವಾಟಿಕೆಯಂತಹ ದಂಧೆಗಳು ಎಗ್ಗಿಲ್ಲದೇ ನಡೆಯುತ್ತಿರುವದು ಇದೀಗ ಪೊಲೀಸ ದಾಳಿಯಿಂದ ಪತ್ತೆಯಾಗಿದೆ. ದಾಳಿ ಮಾಡಿರುವ ಲಾಡ್ಜಗಳು ಪ್ರಭಾವಿ ಬೆಂಬಲಿಗರಿಗೆ ಸೇರಿದ್ದು ಎನ್ನಲಾಗುತ್ತಿದೆ, ಜಿಲ್ಲೆಯ ಪೊಲೀಸರು ಅದ್ಯಾವುದಕ್ಕೂ ಮಣೆ ಹಾಕದೇ ಸ್ಪಾ ಹೆಸರಿನಲ್ಲಿ ಮಿತಿ ಮೀರಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿದ್ದಾರೆ. ಇದು ಮುಧೋಳ ನಗರದಲ್ಲಿ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ.
ಮುಧೋಳಕ್ಕೆ ಸೀಮಿತವಾಗಿಲ್ಲ..
ಹೊರರಾಜ್ಯದ ಯುವತಿಯರನ್ನು ಪ್ರೇರೆಪಿಸಿ ವೇಶ್ಯಾವಾಟಿಕೆ ದಂಧೆಗೆ ಇಟ್ಟುಕೊಳ್ಳುವ ಪರಿಪಾಠ ಬರೀ ಮುಧೋಳ ಕೆಲ ಲಾಡ್ಜ್ಗಳಿಗೆ ಸೀಮಿತವಾಗಿಲ್ಲ. ಜಿಲ್ಲೆಯ ವಿವಿಧ ನಗರ ಮತ್ತು ಪಟ್ಟಣ ಪ್ರದೇಶಶಗಳಲ್ಲೂ ಇದು ವ್ಯಾಪಿಸಿದೆ. ಪ್ರತಿಷ್ಠಿತ ಲಾಡ್ಜಗಳು ಸ್ಪಾ ಹೆಸರಿನಲ್ಲಿ ಈ ರೀತಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮಾತುಗಳು ಕೇಳಿಬರುತ್ತಿದೆ. ಆದರೆ ಪ್ರಭಾವಿಗಳ ಬೆಂಬಲಿಗರ ಲಾಡ್ಜ್ಗಳು ಇರುವದರಿಂದ ಈ ಬಗ್ಗೆ ಪೊಲೀಸರಿಗೆ ದೂರು ಕೊಡಲು ಸಹ ಸಾರ್ವಜನಿಕರು ಹಿಂದೇಟು ಹಾಕುತ್ತಾರೆ. ಮುಧೋಳದಲ್ಲಿ ನಡೆದಿರುವಂತೆ ಜಿಲ್ಲೆಯಾದ್ಯಂತ ಹೀಗೆ ಅನುಮಾನವಿರುವ ಲಾಡ್ಜ್ಗಳ ಮೇಲೆ ನಿರಂತರ ತಪಾಸಣೆ ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವೇಶ್ಯಾವಾಟಿಕೆ ನಡೆಸಲು ಮಹಿಳೆಯರನ್ನು ಇಟ್ಟುಕೊಂಡಿದ್ದ ಮುಧೋಳ ನಗರದ ೪ ಲಾಡ್ಜ್ಗಳ ಮೇಲೆ ದಾಳಿ ಮಾಡಿ ೧೦ ಜನ ಮಹಿಳೆಯರನ್ನು ರಕ್ಷಿಸಲಾಗಿದೆ. ೧೧ ಜನರ ಮೇಲೆ ದೂರು ದಾಖಲಿಸಲಾಗಿದೆ. ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ತಂಡಗಳಿಗೆ ಬಹುಮಾನ ಕೊಡಲಾಗುವದು. ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೇ ಮೀನಮೇಷ ಎಣಿಸದೇ ಅಂತಹ ಲಾಡ್ಜ್ಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು.
ಅಮರನಾಥ ರೆಡ್ಡಿ
ಪೊಲೀಸ್ ವರಿಷ್ಠಾಧಿಕಾರಿಗಳು ಬಾಗಲಕೋಟೆ.