ಮುಖ್ಯಮಂತ್ರಿಗಳೇ ನಿಮ್ಮೊಲ್ಲೊಂದು ಮನವಿ..........

ಕಳೆದ ೭ ವರ್ಷಗಳಲ್ಲಿ ಆಲಮಟ್ಟಿ ಯೋಜನೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಇಚ್ಛಾಶಕ್ತಿ ಕೊರತೆ ಒಂದೆಡೆಯಾದರೆ ೧೦ ಸಾವಿರ ಕೋಟಿ ರೂ. ಅನುದಾನವನ್ನು ಘೋಷಿಸಿ ಕಾಲಮಿತಿ ಹಾಕಬೇಕಾಗಿರುವ ನಿಮ್ಮ ಇಚ್ಛಾಶಕ್ತಿಗೆ ಕೋವಿಡ್ ಅಡ್ಡಿಯುಂಟು ಮಾಡಿದೆ.

ಮುಖ್ಯಮಂತ್ರಿಗಳೇ ನಿಮ್ಮೊಲ್ಲೊಂದು ಮನವಿ..........
ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ, ನಿಮೊಲ್ಲೊಂದು ಮನವಿ. ಅವಳಿ ಜಿಲ್ಲೆ ವಿಜಯಪುರ - ಬಾಗಲಕೋಟೆ ನಿರಂತರವಾಗಿ ಪ್ರವಾಹ ಇಲ್ಲವೇ ಬರ ಸಂಕಷ್ಟದಲ್ಲಿ ಬೇಯುತ್ತಿದೆ, ಇದಕ್ಕೆ ಪರಿಹಾರ ಕೊಡಬೇಕಾದ ದೊರೆಗಳು ನೀವು. ಕೃಷ್ಣಾ ತಟದಲ್ಲಿ ಪ್ರವಾಹದ ಸಂಕಷ್ಟಕ್ಕಾಗಿ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಿರಿ, ಹಾನಿಯ ಖುದ್ದು ಅಂದಾಜು ಮಾಡುತ್ತಿದ್ದಿರಿ. ನಿರಂತರವಾಗಿ ಪ್ರವಾಹದಿಂದ ಬೆಳೆದು ನಿಂತ ಫಸಲು ಕೊಚ್ಚಿ ಹೋಗುತ್ತಿದೆ. ಆಲಮಟ್ಟಿ ಜಲಾಶಯವನ್ನು ೫೨೪.೨೫೬ ಮೀ.ಗೆ ಎತ್ತರಿಸಿದರೆ ಕೃಷ್ಣೆಯ ಪ್ರವಾಹವನ್ನು ನಿಯಂತ್ರಿಸಬಹುದಾಗಿದೆ. ಹಿನ್ನೀರು ಘಟಪ್ರಭಾ ತಟದಲ್ಲಿ ವ್ಯಾಪಿಸಿ ಅಲ್ಲಿನ ಹಳ್ಳಿಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಇವುಗಳನ್ನೆಲ್ಲ ಸ್ಥಳಾಂತರಿಸಲು ಸರಕಾರ ಕ್ರಮ ಕೈಗೊಳ್ಳುವದು ಅಗತ್ಯವಾಗಿದೆ. ನಿಸರ್ಗ ವಿಕೋಪಕ್ಕೆ ಪ್ರತಿ ವರ್ಷವೂ ಹಾನಿ, ಪ್ರತಿ ವರ್ಷವೂ ಪರಿಹಾರ ಕೊಡಬೇಕಾಗಿರುವದು ಸರಕಾರದ ಪಾಲಿನ ಅನಿವಾರ್ಯತೆ ಹಾಗೆಯೇ ಹಾನಿಯನ್ನು ಅನುಭವಿಸಬೇಕಾಗಿರುವದು ರೈತರ, ಸಂತ್ರಸ್ತರ ಪಾಲಿನ ಕಷ್ಟ. ಇದಕ್ಕೆಲ್ಲ ಶಾಶ್ವತವಾಗಿ ಒಂದೇ ಬಾರಿಗೆ ಇತ್ಯರ್ಥಪಡಿಸಲು ಸರಕಾರ ಮುಂದಾಗಬೇಕಿದೆ. ಆಲಮಟ್ಟಿ ಜಲಾಶಯ ಕರ್ನಾಟಕ ನದಿ ನೀರಿನ ಪಾಲಿನ ಸಂಪೂರ್ಣ ಬಳಕೆಗೆ ಸಾಮರ್ಥ್ಯ ಹೊಂದಿದೆ. ದುರಂತ ಎಂದರೆ ಪ್ರವಾಹ ಹರಿದು ಬಂದು ಇದೇ ಜಲಾಶಯದ ಮೂಲಕ ಸಮುದ್ರ ಸೇರುವ ಮುನ್ನ ಸಾಕಷ್ಟು ಹಾನಿಯುಂಟು ಮಾಡುತ್ತಿದೆ, ಇದನ್ನು ತಡೆಯಬೇಕಾಗಿರುವದು ಸರಕಾರದ ಕರ್ತವ್ಯ.
ಕಳೆದ ೭ ವರ್ಷಗಳಲ್ಲಿ ಆಲಮಟ್ಟಿ ಯೋಜನೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಇಚ್ಛಾಶಕ್ತಿ ಕೊರತೆ ಒಂದೆಡೆಯಾದರೆ ೧೦ ಸಾವಿರ ಕೋಟಿ ರೂ. ಅನುದಾನವನ್ನು ಘೋಷಿಸಿ ಕಾಲಮಿತಿ ಹಾಕಬೇಕಾಗಿರುವ ನಿಮ್ಮ ಇಚ್ಛಾಶಕ್ತಿಗೆ ಕೋವಿಡ್ ಅಡ್ಡಿಯುಂಟು ಮಾಡಿದೆ. ಜನ ಇದನ್ನು ಅರಿತಿರುತ್ತಾರೆ. ಆದರೂ ಸಹ ಆದಷ್ಟು ಬೇಗ ೩ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿ ಆಲಮಟ್ಟಿ ಮೈದುಂಬಿಕೊಳ್ಳುವಂತೆ ಕ್ರಮ ಕೈಗೊಳ್ಳುತ್ತಿರಿ ಎಂದು ಆಶಿಸುತ್ತ ಪ್ರವಾಹದ ಸಂದರ್ಭದ ಹಾನಿಗೆ ನೈಜ ಪರಿಹಾರ ಸಿಗಬೇಕು, ಕಣ್ಣೀರು ಸುರಿಸುತ್ತಿರುವ ಅನ್ನದಾತನ ಸಂಕಷ್ಟ ನಿವಾರಣೆಯಾಗಬೇಕು, ಹಾನಿಯ ಅಂದಾಜು ಮಾಡುವಾಗ ಅದರಲ್ಲಿ ನೈಜತೆ ಇರಬೇಕೆ ವಿನಃ ಅಕ್ರಮ ಇರದಂತೆ ಸರಕಾರ ಗಮನಹರಿಸಬೇಕೆಂದು ನಾಡನುಡಿ ಮನವಿ ಮಾಡಿಕೊಳ್ಳುತ್ತದೆ.
- ಸಂ.