ನೆರೆ ರಾಜ್ಯಗಳಲ್ಲಿ ಕೊರೊನಾ ಉಲ್ಬಣ: ರಾಜ್ಯದ ಹಲವು ಜಿಲ್ಲೆಗಳಲ್ಲಿ ತಪಾಸಣೆ ತೀವ್ರ..!
ನಾಡನುಡಿ ನ್ಯೂಸ್
ಬಾಗಲಕೋಟೆ:
ನೆರೆ ರಾಜ್ಯಗಳಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು, ಅವುಗಳಿಗೆ ಹೊಂದಿಕೊಂಡಂತಿರುವ ಕರ್ನಾಟಕದ ಹಲವು ಜಿಲ್ಲೆಗಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ತೀವ್ರಗೊಳಿಸಲು ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದ್ದಾರೆ.
ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದ್ದು, ಈ ಹಿನ್ನೆಲೆಯಲ್ಲಿ ಗಡಿಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ತಪಾಸಣೆ ತೀವ್ರಗೊಳಿಸಲು ಅವರು ಸೂಚಿಸಿದ್ದಾರೆ.
ರಾಜ್ಯದಿಂದ ನೆರೆ ರಾಜ್ಯಗಳಿಗೆ ದುಡಿಯಲು ತೆರಳಿರುವವರ ಸಂಖ್ಯೆ ಹೆಚ್ಚಿದೆ. ಅವರು ಆಗಾಗ ತಮ್ಮ ಊರುಗಳಿಗೆ ಭೇಟಿ ನೀಡುವುದರಿಂದ ಇಲ್ಲಿಯೂ ರೋಗ ಹರಡಬಹುದು ಈ ನಿಟ್ಟಿನಲ್ಲಿ ತಪಾಸಣೆ ತೀವ್ರಗೊಳಿಸಲು ಅವರು ಆದೇಶಿಸಿದ್ದಾರೆ.
ಬೀದರ್, ಬೆಳಗಾವಿ, ಕಲಬುರಗಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದಲ್ಲಿದ್ದಾರಲ್ಲದೇ, ಇವುಗಳು ಗಡಿಗೆ ಹತ್ತಿರವಾಗಿರುವುದರಿಂದ ಕಟ್ಟೆಚ್ವರ ವಹಿಸಬೇಕೆಂದು ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಂಬಂಧಿಸಿದವರಿಗೆ ಕೂಡಲೇ ಸೂಚನೆ ನೀಡುವಂತೆ ತಿಳಿಸಿದ್ದಾರೆ.