ಕಟ್ಟೆಮೇಲೆ ಕುಳಿತು ಟೀಕಿಸಿದರೆ ಜಿಡಿಪಿ ಹೆಚ್ಚದು-ಖ್ಯಾತ ಕಥೆಗಾರ ಎಸ್. ಎನ್. ಸೇತುರಾಮ್
ನಾಡನುಡಿ ನ್ಯೂಸ್
ಬಾಗಲಕೋಟೆ:
ಜಿಡಿಪಿ ಬಗ್ಗೆ ಕಟ್ಟೆ ಮೇಲೆ ಕುಳಿತು ಸರ್ಕಾರವನ್ನು ಟೀಕಿಸಿದರೆ ಸಾಲದು, ಅದಕ್ಕೆ ತಕ್ಕದಾದಂತೆ ಪ್ರತಿಯೊಬ್ಬರ ದುಡಿಮೆಯೂ ಹೆಚ್ಚಬೇಕೆಂದು ಕಥೆಗಾರ, ಹಿರಿಯ ನಟ ಎಸ್.ಎನ್.ಸೇತುರಾಮ್ ಹೇಳಿದರು.
ಬಾಗಲಕೋಟೆಯಲ್ಲಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂಥಾ ಚೆಂದದ ಬದುಕು ವಿಷಯವಾಗಿ ಉಪನ್ಯಾಸ ನೀಡಿದ ಅವರು, ಜಿಡಿಪಿ ಹೆಚ್ಚಳ ಆಗಬೇಕೆಂದು ನಾನೂ ಮೂವತ್ತು ವರ್ಷದಿಂದ ಯೋಚಿಸುತ್ತಿದ್ದೆ. ಆದರೆ ಈ ವಿಚಾರದಲ್ಲಿ ಸರ್ಕಾರಕ್ಕಿಂತ ಅದರ ಬಗ್ಗೆ ಮಾತಾಡುವರು ಯೋಚಿಸಬೇಕು. ಪ್ರತಿಯೊಬ್ಬರ ಆದಾಯ ಹೆಚ್ಚಳಗೊಂಡಾಗ ದೇಶದ ಜಿಡಿಪಿ ಹೆಚ್ಚಲ್ಲವೇ ಎಂದು ಪ್ರಶ್ನಸಿದರು.
ಪೊಲೀಸರು ಕಳ್ಳರನ್ನು ಹಿಡಿಯದೆ, ಅದಾಯ ತೆರಿಗೆ ಅಧಿಕಾರಿಗಳು ವಂಚಕರನ್ನು ಹಿಡಿಯದ ವ್ಯವಸ್ಥೆ ಇದೆ.ಇಂಥವರನ್ನು ಒಳಗೊಂಡು ಆಡಳಿತ ನಡೆಸಲಾಗುತ್ತದೆ.ಇವುಗಳ ಮಧ್ಯೆ ವ್ಯವಸ್ಥೆಯಲ್ಲಿ ಸತ್ಯಸಂದರು ಸಿಗುತ್ತಾರೆಂಬುದು ಖುಷಿಯ ವಿಚಾರ ಎಂದರು.
ಭಾರತವನ್ನು ಇತರ ದೇಶಗಳೊಂದಿಗೆ ಹೋಲಿಕೆ ಮಾಡುವುದು ತಪ್ಪು. ನಮ್ಮಲ್ಲಿರುವಷ್ಟು ಭಾಷೆ, ಧರ್ಮ, ಜಾತಿ, ರಾಜ್ಯ, ಗುಂಪುಗಳು ಜಗತ್ತಿನ ಯಾವ ದೇಶದಲ್ಲೂ ಕಂಡು ಬರುವುದಿಲ್ಲ. ಯಾವುದೇ ದೇಶದ ವಿರುದ್ಧ ಭಾರತ ದಂಡೆತ್ತಿ ಹೋಗಿಲ್ಲ ಇಂಥ ಪುಣ್ಯ ಭೂಮಿಯಲ್ಲಿ ವಾಸಿಸುವುದೇ ಹೆಮ್ಮೆಯ ವಿಚಾರ ಎಂದರು.
ಎಸಿ ಕಾರಿನಲ್ಲಿ ಮುಖ ಗಂಟುಹಾಕಿಕೊಂಡು ಬಂದು ದೋಚುವವರಿಗಿಂತ ಯಾವುದೇ ಪ್ರತಿಷ್ಠೆ ಇಲ್ಲದೇ ಸಾಮಾನ್ಯವಾಗಿ ಬದುಕುವ ಜನರೇ ಈ ದೇಶದ ಆಸ್ತಿ ಎಂದರು.