ಜಿಲ್ಲೆಯಲ್ಲಿ 2.65 ಲಕ್ಷ ಹೆಕ್ಟೆರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ

ಜಿಲ್ಲೆಯಲ್ಲಿ 2.65 ಲಕ್ಷ ಹೆಕ್ಟೆರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ

ನಾಡನುಡಿ ನ್ಯೂಸ್ 
ಬಾಗಲಕೋಟೆ:

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಳ್ಳೆಯ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 2.65 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಿ ಡಾ.ಚೇತನಾ ಪಾಟೀಲ ತಿಳಿಸಿದ್ದಾರೆ.
           ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಚೇತನಾ ಪಾಟೀಲ ಅವರು ಬಾದಾಮಿ ತಾಲೂಕಿನಲ್ಲಿ 57000 ಹೆಕ್ಟೇರ್, ಬಾಗಲಕೋಟೆಯಲ್ಲಿ 29000 ಹೆಕ್ಟೇರ್, ಬೀಳಗಿಯಲ್ಲಿ 24425 ಹೆಕ್ಟೇರ, ಹುನಗುಂದದಲ್ಲಿ 42925 ಹೆಕ್ಟೇರ್, ಜಮಖಂಡಿಯಲ್ಲಿ 66650 ಹೆಕ್ಟೇರ್ ಹಾಗೂ ಮುಧೋಳದಲ್ಲಿ 45000 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಏಕದಳ ಧಾನ್ಯಗಳಲ್ಲಿ ಗೋವಿನ ಜೋಳ 41700 ಹೆಕ್ಟೇರ್ ಕ್ಷೇತ್ರದಲ್ಲಿ ಹಾಗೂ ಸಜ್ಜೆ 23000 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದೆ. ದ್ವಿದಳ ಧಾನ್ಯಗಳಲ್ಲಿ ತೊಗರಿ 30000 ಹೆಕ್ಟೇರ್ ಹಾಗೂ ಹೆಸರು 32000 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇರುವುದಾಗಿ ತಿಳಿಸಿದ್ದಾರೆ.


           ಎಣ್ಣಿ ಕಾಳುಗಳಲ್ಲಿ ಸೂರ್ಯಕಾಂತಿ 24000 ಹೆಕ್ಟೇರ್ ಹಾಗೂ ಸೋಯಾ ಅವರೆ ಅಂದಾಜು 4000 ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಪೂರ್ವ ಮುಂಗಾರು ಹಾಗೂ ಮುಂಗಾರು ಬೆಳೆಗಳ ಬಿತ್ತನೆ ಬೀಜ ದಾಸ್ತಾನು ಮಾಡಲು ಬೇಡಿಕೆಯನ್ನು ಸಂಸ್ಥೆಗಳಿಗೆ ನೀಡಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಹೆಸರು 262 ಕ್ವಿಂ, ತೊಗರಿ 61 ಕ್ವಿಂ, ಸೋಯಾ ಅವರೆ 1050 ಕ್ವಿಂ ದಾಸ್ತಾನು ಇದ್ದು, ಗೋವಿನಜೋಳ, ಸಜ್ಜೆ, ಉದ್ದು ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಸದ್ಯದಲ್ಲಿಯೇ ದಾಸ್ತಾನು ಮಾಡಿಕೊಂಡು ರೈತರಿಗೆ ವಿತರಣೆ ಮಾಡಲಾಗುವುದೆಂದು ತಿಳಿಸಿದ್ದಾರೆ.
           ಜಿಲ್ಲೆಯ ಒಟ್ಟು 18 ರೈತ ಸಂಪರ್ಕ ಕೇಂದ್ರಗಳಲ್ಲದೆ ಹೆಚ್ಚುವರಿಯಾಗಿ 9 ಬಿತ್ತನೆ ಬೀಜ ಕೇಂದ್ರಗಳ ಮುಖಾಂತರ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲು ತಯಾರಿ ಮಾಡಿಕೊಳ್ಳಲಾಗಿದೆ. ತೊಗರಿ, ಉದ್ದು, ಹೆಸರು, ಸೋಯಾಅವರೆ ಬೆಳೆಗಳ ಪ್ರಮಾಣಿತ ಬಿತ್ತನೆ ಬೀಜಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 25 ರೂ. ಹಾಗೂ ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ 37.50 ರೂ.ಗಳ ರಿಯಾಯತಿಯನ್ನು ನಿಗಧಿಪಡಿಸಲಾಗಿದೆ. ಸೂರ್ಯಕಾಂತಿ ಬೆಳೆ ಸಂಕರಣ ತಳಿಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 80 ರೂ. ಹಾಗೂ ಪ.ಜಾತಿ ಮತ್ತು ಪ. ಪಂಗಡದ ರೈತರಿಗೆ 120 ರೂ. ಪ್ರತಿ ಕೆಜಿಗೆ ರಿಯಾಯತಿಯನ್ನು ನಿಗಧಿಪಡಿಸಲಾಗಿದೆ. 
          ಮೆಕ್ಕೆಜೋಳದ ಸಂಕರಣ ಬೆಳೆಗಳಲ್ಲಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 20 ರೂ. ಹಾಗೂ ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ 30 ರೂ. ಪ್ರತಿ ಕೆಜಿಗೆ ರಿಯಾಯತಿಯನ್ನು ನಿಗಧಿಪಡಿಸಲಾಗಿದೆ. ದಾಸ್ತಾನು ಮಾಡಲಾದ ಬಿತ್ತನೆ ಬೀಜಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
           ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 57.9 ಮಿ.ಮೀ ಮಳೆ ಆಗಬೇಕಾಗಿದ್ದು, ವಾಸ್ತವಿಕವಾಗಿ 158.5 ಮಿ.ಮೀ ಮಳೆ ಆಗಿರುತ್ತದೆ. ತಾಲೂಕುವಾರು ಬಾದಾಮಿ 124.3 ಮಿ.ಮೀ, ಬಾಗಲಕೋಟೆ 156 ಮಿ.ಮೀ, ಬೀಳಗಿ 176.7 ಮಿ.ಮೀ, ಹುನಗುಂದ 118.5 ಮಿ.ಮೀ, ಜಮಖಂಡಿ 218.2 ಮಿ.ಮೀ, ಮುಧೋಳ 200.8 ಮಿ.ಮೀ, ಗುಳೇದಗುಡ್ಡ 125.9 ಮಿ.ಮೀ, ರಬಕವಿ-ಬನಹಟ್ಟಿ 196.0 ಮಿ.ಮೀ, ಇಳಕಲ್ಲ 120.4 ಮಿ.ಮೀ ನಷ್ಟು ಮಳೆ ಆಗಿದ್ದು, ಹಂಗಾಮಿನ ಬಿತ್ತನೆ ಬೆಡಿಕೆ ಅನುಸಾರ ಬೀಜಗಳನ್ನು ಸರಬರಾಜು ಮಾಡಿಸಿಕೊಂಡು ವಿತರಣೆ ಮಾಡಲಾಗುವುದೆಂದು ತಿಳಿಸಿದ್ದಾರೆ. 
           ಬಿತ್ತನೆಗೆ ಅವಶ್ಯವಿರುವ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ರೈತ ಬಾಂಧವರು ರಸಗೊಬ್ಬರಗಳ ಖರೀದಿಯನ್ನು ಪಿಓಎಸ್ ಯಂತ್ರದ ಮುಖಾಂತರವೆ ಪಡೆಯಲು ಆಧಾರ ಸಂಖ್ಯೆಯನ್ನು ನೀಡಿ ಸಹಕರಿಸಲು ರೈತರಲ್ಲಿ ಕೋರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಹೋಬಳಿಯ, ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.

 ಪ್ರಸಕ್ತ ಸಾಲಿನ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಲಾಗುವ ಪ್ರಮಾಣಿತ ಸ್ವ-ಪರಾಗಸ್ಪರ್ಶಿ ಬೆಳೆಗಳಲ್ಲಿ ಬೀಜ ಬದಲಿಕೆ ಅನುಪಾತದನ್ವಯ ಒಮ್ಮೆ ಬಿತ್ತನೆ ಬೀಜಗಳನ್ನು ವಿತರಿಸಿದ ರೈತರಿಗೆ ಮುಂದಿನ ಮೂರು ವರ್ಷಗಳ ಬಳಿಕ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಮುಂಬರುವ ವರ್ಷದಲ್ಲಿ ಅಂತಹ ರೈತರಿಗೆ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದಿಲ್ಲ. ಒಂದು ವೇಳೆ ರೈತರು ಬೆಳೆ ಪರಿವರ್ತನೆ ಮಾಡಲು ಇಚ್ಛಿಸಿದಲ್ಲಿ ಮಾತ್ರ ಬೇರೆ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ಮುಂಬರುವ ವರ್ಷಗಳಲ್ಲಿ ವಿತರಿಸಲಾಗುವು ಹಾಗೂ ಈ ವ್ಯವಸ್ಥೆಯು ಪ್ರಕೃತಿ ವಿಕೋಪ ಉಂಟಾದ ವರ್ಷಗಳಿಗೆ ಅನ್ವಯಿಸುವುದಿಲ್ಲ.
ಡಾ.ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕರು

(ಜಾಹೀರಾತು)