ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸೋಲಿಸಿ, ಸಿದ್ದು ಕುರ್ಚಿ ಗಟ್ಟಿಗೊಳಿಸಿ 

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸೋಲಿಸಿ, ಸಿದ್ದು ಕುರ್ಚಿ ಗಟ್ಟಿಗೊಳಿಸಿ 


ಬಾಗಲಕೋಟೆ: ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದವರಿಯಬೇಕಾದರೆ ಹಾಲುಮತ ಸಮಾಜದವರು ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.     
 ನಗರದಲ್ಲಿ ಪಿ.ಸಿ.ಗದ್ದಿಗೌಡರ ನಾಮಪತ್ರ ಸಲ್ಲಿಕೆ ನಂತರ ನಡೆದ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಸಚಿವ ಶಿವಾನಂದ ಪಾಟೀಲ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ರೂಪಿಸಿದ ಯೋಜನೆಯ ಪ್ರಕಾರ ಲೋಕಸಭೆ ಚುನಾವಣೆ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ' ನಾನು ಯಾವುದನ್ನೂ ಸುಳ್ಳು ಮಾತನಾಡುವುದಿಲ್ಲ ಎಂದರು. 
 ಗದ್ದಿಗೌಡರ ಈ ಬಾರಿ ಗೆದ್ದು ಕೇಂದ್ರದಲ್ಲಿ ಸಚಿವರಾಗಲಿದ್ದಾರೆ. ಶೆಟ್ಟರ್ ಸಂಸದರಾಗಿ ಮುಂದವರಿಯಬೇಕು ಸಚಿವರಾದರೆ, ಅವರ ಮನೆ ಮುಂದೆ ಪ್ರತಿಭಟನೆ ಮಾಡುವೆ ಲಘುದಾಟಿಯಲ್ಲಿ ಕಾಲೆಳೆದರು.  'ಪಂಚಮಸಾಲಿ ಮೀಸಲಾತಿ ಹೋರಾಟಕ್ಕಾಗಿ ನಾವೆಲ್ಲರೂ ಹೋರಾಟ ಮಾಡಿದರೆ, ಸಚಿವ ಶಿವಾನಂದ ಪಾಟೀಲ ಒಂದು ದಿನವೂ ಬೆಂಬಲ ನೀಡಲಿಲ್ಲ. ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೋರಾಟಕ್ಕೆ ಆರ್ಥಿಕ ನೆರವು ಕೇಳಿದರೆ, ಮಗಳ ಮದುವೆಯಿದೆ. ಭಯಂಕರ ಸಾಲವಿದೆ ಎಂದು ಹೇಳಿ ಕಳುಹಿಸಿದ್ದರು. ಆದರೆ, ಈಗ ಪಂಚಮಸಾಲಿ ಹೆಸರೇಳಿಕೊಂಡು ಮತ ಕೇಳುತ್ತಿದ್ದಾರೆ. ಮೀಸಲಾತಿ ಹೋರಾಟಕ್ಕೆ ನಿಮ್ಮ ಕೊಡುಗೆ ಏನು' ಎಂದು ಪ್ರಶ್ನಿಸಿದರು.
 'ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ರೊಕ್ಕ ಬಹಳ ಕೊಡತಾರ. ಶಿಸ್ತಾಗಿ ತಗೊರಿ. ನೋಟು ಕಾಂಗ್ರೆಸ್‌ನದ್ದು, ವೋಟು ಬಿಜೆಪಿಗೆ ನೀಡಿರಿ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ರೋಜಾ ಮಾಡಬೇಕಾಗುತ್ತದೆ. ತಯಾರಿದ್ದೀರಾ? ಎಂದು ಪ್ರಶ್ನಿಸಿದರು. "ಹರಿಹರದಿಂದ ಒಬ್ಬ ಸ್ವಾಮಿ ಬಂದಾನವ್ವ, ಬೊಮ್ಮಾಯಿ ಹೆಲಿಕಾಫ್ಟರ್‌ನ್ಯಾಗ ಅಡ್ಡಾಡತಾನವ್ವ, ಯಡಿಯೂರಪ್ಪನ ಮನ್ಯಾಗ ಟಿಫಿನ್ ಮಾಡತಾನವ್ವ, ಬುಕ್ಕಿಂಗ್ ಸ್ವಾಮಿ ಬಂದಾನವ್ವ, ೧೫-೨೦ ಕೋಟಿ ಹೊಡಕೊಂಡ ಹೊಕ್ಕಾನವ್ವ' ಎಂದು ಹಾಡಿ ಟೀಕೆ ಮಾಡಿದರು. ಅಲ್ಲದೇ ಧಾರವಾಡದಿಂದ ಸ್ಪರ್ಧಿಸಿರುವ ಸ್ವಾಮಿ ದಿಂಗಾಲೇಶ್ವರ ಅಲ್ಲ ದಂಗಾಲೇಶ್ವರ ಎಂದು ಕುಟುಕಿದರು.