ಬಾಗಲಕೋಟೆ: ಜಿಲ್ಲಾಡಳಿತ ಭವನದ ಆವರಣದಲ್ಲಿ ಆರೋಗ್ಯಕರವಾದ ಚಿಂಚಾ (ಹುಣಸೆ ಹಣ್ಣಿನ) ಪಾನಕ ವಿತರಣೆಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಪಾನಕ ಕುಡಿಯುವ ಮೂಲಕ ಬುಧವಾರ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಆಯುಷ ಪಾನೀಯ ಪರಿಚಯ ಕಾರ್ಯಕ್ರಮದಡಿ ಚಿಂಚಾ ಪಾನಕ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಬಿಸಿಲಿನ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಿದ್ದು, ಈ ಬೇಸಿಗೆಯ ಸುಡು ಬಿಸಿಲಿನ ದಿನಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯಕರವಾದ ಪಾನೀಯಗಳ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಆಯುಷ ಪಾನೀಯ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಡಳಿತ ಭವನದಲ್ಲಿರುವ ಎಲ್ಲ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಕಚೇರಿಗೆ ಆಗಮಿಸುವ ಸುಮಾರು ೫೦೦ ಜನ ಸಾರ್ವಜನಿಕರಿಗೆ ಪ್ರತಿ ವ್ಯಕ್ತಿಗೆ ೧೦೦ ಎಂ.ಎಲ್ ನಂತೆ ಆಯುಷ ಚಿಂಚಾ ಪಾನಕ ನೀಡಲಾಗುತ್ತಿದೆ. ಈ ಪಾನಕ ಕುಡಿಯುವದರಿಂದ ಚೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಮಲಬದ್ದತೆ ನಿವಾರಿಸುವುದರ ಜೊತೆಗೆ ಶರೀರದ ದಾಹ ಹಾಗೂ ಬಾಯಾರಿಕೆಯನ್ನು ಸಹ ನೀಗಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಅವರು ಚಿಂಚಾ ಪಾನಕ (ಹುಣಸೆ ಹಣ್ಣಿನ ಪಾನಕ) ದಿಂದಾಗುವ ಉಪಯೋಗ ಹಾಗೂ ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು. ಚಿಂಚಾ ಪಾನಕಕ್ಕೆ ಹುಣಸೆ ಹಣ್ಣು ೧೦೦ ಗ್ರಾಂ, ಬೆಲ್ಲದ ಪುಟಿ ೪೦೦ ಗ್ರಾಂ. ಜೀರಿಗೆ ಪುಡಿ ೧೦ ಗ್ರಾಂ, ಕಾಳು ಮೆಣಸಿನ ಪುಡಿ ೫ ಗ್ರಾಂ ಹಾಗೂ ಸೈಂದವ ಲವಣ ೫ ಗ್ರಾಂ ವಸ್ತುಗಳು ಬೇಕಾಗುತ್ತವೆ ಎಂದರು.
ಪಾನಕ ಮಾಡುವ ವಿಧಾನ :
ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ಇಡೀ ರಾತ್ರಿ ನೆನಸಿಡಬೇಕು. ಮರುದಿನ ಬೆಳಿಗ್ಗೆ ಅದನ್ನು ಶುದ್ದವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಂಡು ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಗೆ ಹಾಕಿಕೊಂಡು ಅಗತ್ಯ ಪ್ರಮಾಣದ ಹುಣಸೆ ಹಣ್ಣಿನ ಮಿಶ್ರಣವನ್ನು ನೀರಿನ ಪಾತ್ರೆಗೆ ಹಾಕಿ ನಿರ್ದಿಷ್ಟ ಪ್ರಮಾಣದ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಬೇಕು. ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವನ್ನು ಸೇರಿಸಬೇಕು. ೫೦ ರಿಂದ ೧೦೦ ಮಿಲಿ ಕುಡಿಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾನಕದ ಮಾಹಿತಿ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ವಾರ್ತಾಧಿಕಾರಿ ಅಮರೇಶ ದೊಡಮನಿ, ಜಿಲ್ಲಾಧಿಕಾರಿ ಕಚೇರಿಯ ಬಿ.ವಾಯ್.ಪಾಟೀಲ, ಮಂಜುನಾಥ ಪಾಟೀಲ, ಆಯುಷ ಇಲಾಖೆಯ ಜ್ಯೋತಿ ಕಾಂಬಳೆ, ಈರಮ್ಮ ಜಕನೂರ, ನಸತರ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.