ಕುರುಬ ಸಮುದಾಯ ಒಡೆಯಲು RSS ನಿಂದ ಹುನ್ನಾರ: ಸಿದ್ದರಾಮಯ್ಯ ಆರೋಪ
ಬಾಗಲಕೋಟೆಯಲ್ಲಿ ಕುರುಬ ಸಮಾಜದ ಮಠಾಧೀಶರು, ಸಚಿವ ಈಶ್ವರಪ್ಪ ನೇತೃತ್ವದಲ್ಲಿ ನಡದಿರುವ ಹೋರಾಟದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಪಸ್ವರ ಎತ್ತಿದ್ದಾರೆ ಈ ಕುರಿತಾದ ವರದಿ ಇಲ್ಲಿದೆ ಓದಿ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುರುಬ ಎಸ್ಟಿಗಾಗಿ ನಡೆದುರುವ ಹೋರಾಟ ಆರ್.ಎಸ್.ಎಸ್. ಪ್ರೇರಿತ ಎಂದು ಟೀಕಿಸಿದ್ದಾರೆ.
ತಮ್ಮನ್ನು ಆಹ್ವಾನಿಸಿದರೂ ಭಾಗವಹಿಸಿಲ್ಲ ಎಂಬ ಸಚಿವ ಈಶ್ವರಪ್ಪನವರ ಹೇಳಿಕೆಗೆ ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಅವರು ಕುರುಬ ಎಸ್ಟಿ ಹೋರಾಟದ ಸಮಾವೇಶವು ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರ ಅಣತೆಯಂತೆ ನಡೆದಿದೆ ಎಂದು ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿ ಕಳೆದ ಭಾನುವಾರಷ್ಟೇ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಸಮಾವೇಶ ನಡೆದಿತ್ತು.
ಹೋರಾಟ ಸಮಿತಿಗೆ ಕಾಂಗ್ರೆಸ್ಸಿನ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಶಾಂತಗಿರಿ, ಕಾಂಗ್ರೆಸ್ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಕಾಶಿನಾಥ ಹುಡೇದ, ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತುಸಿಕೊಂಡಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಸಹ ಸಮಾವೇಶದಲ್ಲಿ ಗುರುತಿಸಿಕೊಂಡಿದ್ದರು. ಶಾಂತಗಿರಿ ಹೋರಾಟ ಸಮಿತಿಗೆ ಜಿಲ್ಲಾಧ್ಯಕ್ಷರಾಗಿದ್ದರೆ, ಕಾಂಗ್ರೆಸ್ ಮುಖಂಡ ಹಣಮಂತ ರಾಕುಂಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಸಿದ್ದು ಆಪ್ತ , ಮಾಜಿ ಸಚಿವ ಎಚ್.ಎಂ.ರೇವಣ್ಣ ಸಹ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶಕ್ಕೆ ಸಿದ್ದು ಒಪ್ಪಿಗೆ ಇಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿದ್ದರಾಮಯ್ಯ ಅವರ ಅನುಮತಿಯೊಂದಿಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಾವೆಲ್ಲರೂ ಅವರ ಶಿಷ್ಯಂದರೆ ಅವರ ಅನುಮತಿ ಇದ್ದಿದ್ದಕ್ಕಾಗಿಯೇ ಭಾಗವಹಿಸುತ್ತಿದ್ದೇವೆ ಇದು ಪಕ್ಷಾತೀತ ಹೋರಾಟ ಎಂದು ಹೇಳಿದ್ದರು.
ಆದರೆ ಇಷ್ಟು ದಿನ ಮೌನವಾಗಿದ್ದ ಸಿದ್ದು ದಿಢೀರ್ ಅಚ್ಚರಿಯ ಹೇಳಿಕೆ ನೀಡಿದ್ದು, ಇದೀಗ ಸಮುದಾಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಸಿದ್ದು- ಈಶ್ವರಪ್ಪ ನಡುವಿನ ವಾಕ್ಸಮರಕ್ಕೂ ಇದು ಕಾರಣವಾಗಿವ ಸಾಧ್ಯತೆಯಿದ್ದು, ಸಮಾಜಕ್ಕೆ ಮೀಸಲಾತಿಗೆ ಒತ್ತಾಯಿಸಿ ನಡೆದಿರುವ ಹೋರಾಟ ಇಬ್ಬರ ನಡುವಿನ ಅಸಮಾಧಾನದಿಂದಾಗಿ ಕ್ಷೀಣಸಲಿದೆಯಾ ಎಂಬ ಆತಂಕವೂ ಸಮಾಜ ಮುಖಂಡರನ್ನು ಕಾಡಲಾರಂಭಿಸಿದೆ.