ಜ.೨ರಿಂದ ಬಾಗಲಕೋಟೆಯಲ್ಲಿ ತೋಟಗಾರಿಕೆ ಮೇಳ: ಮೇಳದ ವಿಶೇಷತೆಗಳ ವಿವರ ಇಲ್ಲಿದೆ ಓದಿ
ಜ.೨ರಿಂದ ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಮೇಳದ ಪೂರ್ಣ ವಿವರ ಇಲ್ಲಿದೆ ಓದಿ
ನಾಡನುಡಿ ನ್ಯೂಸ್
ಬಾಗಲಕೋಟೆ ಡಿ.೩೧:
ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜ.೨.ರಿಂದ ಜ.೪ರವರೆಗೆ ಆರೋಗ್ಯಕ್ಕಾಗಿ ತೋಟಗಾರಿಕೆ ಧ್ಯೇಯದೊಂದಿಗೆ ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಶ ತಿಳಿಸಿದರು.
ಜ.೨ರಂದು ಬೆಳಗ್ಗೆ ೧೧ ಗಂಟೆಗೆ ಮೇಳಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಆನ್ ಲೈನ್ ಮೂಲಕ ಚಾಲನೆ ನೀಡಲಿದ್ದು, ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ ಉಪಸ್ಥಿತರಿರುವರು.ನಂತರ ಮಧ್ಯಾಹ್ನ ೩ಕ್ಕೆ ಮಹಾಮಾರಿಗೆ ಪ್ರತಿರೋಧಕ ಶಕ್ತಿ ಒದಗಿಸುವಲ್ಲಿ ದೇಶಿಯ ಮಸಾಲ ಪದಾರ್ಥಗಳ ಪಾತ್ರ ಕುರಿತು ತಾಂತ್ರಿಕ ಗೋಷ್ಠಿ ನಡೆಸಲಾಗುವುದು ಎಂದು ತಿಳಿಸಿದರು.
ಜ.೩ರಂದು ಮೇಳದ ಎರಡನೇ ದಿನ ಮುಂದವರಿಯಲಿದ್ದು, ೨೩ ಜಿಲ್ಲೆಗಳಿಂದ ಆಯ್ಕೆಯಾದ ರೈತರಿಗೆ ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ ಮಾಡಲಾಗುವುದಯ ತೋಟಗಾರಿಕೆ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಆನ್ ಲೈನ್ ಮೂಲಕ ಭಾಗವಹಿಸಲಿದ್ದು, ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಉಪಸ್ಥಿತರಿರುವರು.
ಜ.೪ರಂದು ಸಂಜೆ ಮೇಳ ಸಮಾರೋಪಗೊಳ್ಳಲಿದ್ದು, ಚಿತ್ರದುರ್ಗ ಮುರಘಾಮಠದ ಡಾ.ಶಿವಮೂರ್ತಿ ಮುರಘರಾಜೇಂದ್ರ ಸ್ವಾಮೀಜಿ, ಸಂಸದ ಪಿ.ಸಿ.ಗದ್ದಿಗೌಡರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸೀಮಿತ ಸಂಖ್ಯೆಯ ರೈತರ ಭೇಟಿಗೆ ಮಾತ್ರವೇ ಅವಕಾಶ ವಿದ್ದು, ನೋಂದಾಯಿತ ರೈತರನ್ನು ಬಿಡಲಾಗುತ್ತದೆ. ವಿವಿ ಪ್ರವೇಶದ್ವಾರದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ.ಪ್ರತಿ ೩೦ ಜನರ ಒಂದು ಗುಂಪು ರಚಿಸಿ ನಮ್ಮ ಒಬ್ಬರು ಸಿಬ್ಬಂದಿಯನ್ನು ಅವರೊಂದಿಗೆ ಬಿಡಲಾಗುತ್ತದೆ. ಅವರ ನೇತೃತ್ವದಲ್ಲಿ ವಿವಿ ವೀಕ್ಷಣೆಗೆ ಅವಕಾಶ ಮಾಡಲಾಗುತ್ತದೆ ಎಂದರು.
ಕೋವಿಡ್ ಹಿನ್ನೆಲೆ ಮೇಳವನ್ನು ಸರಳವಾಗಿ ನಡೆಸಲಾಗುತ್ತಿದೆ ಹೀಗಾಗಿ ವಾಣಿಜ್ಯ ಮಳಿಗೆಗಳಿಗೆ ಅವಕಾಶವಿಲ್ಲ. ಸರ್ಕಾರದ ಸಂಸ್ಥೆಗಳ ಪ್ರದರ್ಶನಕ್ಕೆ ಅವಕಾಶವಿರುತ್ತದೆ ಎಂದರು.
ತೋಟಗಾರಿಕೆ ಪ್ರಾತ್ಯಕ್ಷಿಕೆ, ಮೀನುಗಾರಕೆ ಅಕ್ವೇರಿಯಂ, ಮುಧೋಳ ಶ್ವಾನ ತಳಿಗಳ ಪ್ರಾತ್ಯಕ್ಷಿಕೆ,ರೈತರಿಗೆ ಸಲಹೆ ಮತ್ತು ತಾಂತ್ರಿಕ ಮಾಹಿತಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ವಿಸ್ತರಣಾ ನಿರ್ದೇಶಕ ಡಾ.ವೈ.ಕೆ.ಕೋಟಿಕಲ್ ಉಪಸ್ಥಿತರಿದ್ದರು.