ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜಿಗೆ ಕರವೇ ವಿರೋಧ

ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜಿಗೆ ಕರವೇ ವಿರೋಧ

ಬಾಗಲಕೋಟೆ:
ಖಾಸಗಿ ಸಾರ್ವಜನಿಕ ಸಹಭಾಗಿತ್ವ(public private partnership)ದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮುಖ್ಯಮಂತ್ರಿಗಳ ಹೇಳಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ‌ ಮಾತನಾಡಿ, ಸರ್ಕಾರ ಮೊದಲು ಘೋಷಿಸಿದಂತೆ ಅದಕ್ಕೆ ಅನುದಾನ‌ ಒದಗಿಸಬೇಕೆ ಹೊರತು ಯಾವ ಕಾರಣಕ್ಕೂ ಖಾಸಗಿ ಸಂಸ್ಥೆಗಳ ಮೂಲಕ ಅನುಷ್ಠಾನಕ್ಕೆ ಮುಂದಾಗಬಾರದು ಎಂದು ಹೇಳಿದರು.

೨೦೧೪-೧೫ರಲ್ಲಿ ಘೋಷಣೆಯಾದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ೪೮ ಎಕರೆ ಭೂಮಿಯನ್ನೂ‌ ಮೀಸಲಿಡಲಾಗಿದೆ. ಭಾರತೀಯ ಮೆಡಿಕಲ್ ಕೌನ್ಸಿಲ್ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದು, ಕೂಡಲೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರವೇ ಘೋಷಿಸಿದಂತೆ ಅನುದಾನ ಒದಗಿಸಬೇಕೆಂದು ಆಗ್ರಹಿಸಿದರು.

ಬಾಗಲಕೋಟೆ ಮೆಡಿಕಲ್ ಕಾಲೇಜು ಆರಂಭಕ್ಕೆ ಕ್ಷೇತ್ರದ‌ ಹಾಲಿ ಶಾಸಕ‌ ಡಾ.ವೀರಣ್ಣ ಚರಂತಿಮಠ ಮತ್ತು‌ ಮಾಜಿ ಶಾಸಕ ಎಚ್.ವೈ.ಮೇಟಿ ಅವರ ಹೊಂದಾಣಿಕೆ ರಾಜಕಾರಣದಿಂದ ಕನಸಾಗಿಯೇ ಉಳಿದಿದೆ. ಹಾಲಿ ಶಾಸಕರು ತಾವು ಕಾರ್ಯಾಧ್ಯಕ್ಷರಾಗಿರುವ ಬವಿವ ಸಂಘದ ಸಹಭಾಗಿತ್ವದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸುವ ಹುನ್ನಾರದಲ್ಲಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ಹಿತಕ್ಕಾಗಿ ಸಿಎಂ ಆಗಿದ್ದಾರಾ ಅಥವಾ ಕೇವಲ ಶಾಸಕ ಹಿತ ಕಾಯುವುದೊಂದೇ ಅವರ ಕೆಲಸವೇ. ಇಲ್ಲಿನ ಜನರ ತ್ಯಾಗದ ಮಹತ್ವ ಅರಿಯದ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.

ಕೆಐಎಡಿಬಿ ಗ್ರೀನ್ ಫುಡ್ ಪಾರ್ಕ್ ಜಾಗೆ ವಿಚಾರವಾಗಿ ಮಾತನಾಡಿದ ಅವರು, ಸಚಿವ ಮುರುಗೇಶ ನಿರಾಣಿ ಅವರು ೫೩ ಎಕರೆ ಜಾಗೆಯನ್ನು ಒಂದೇ ಸಂಸ್ಥೆಗೆ‌ ತರಾತುರಿಯಲ್ಲಿ ನೀಡಿರುವ ಬಗ್ಗೆ ಅನುಮಾನಗಳಿದೆ. ಈ ವಿಚಾರದಲ್ಲಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಮೌನವೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇತ್ತೀಚೆಗೆ ಬಾಗಲಕೋಟೆಯ‌ ಕೆಲ ಕೈಗಾರಿಕೋದ್ಯಮಿಗಳು ಆ ೫೩ ಎಕರೆ ಜಾಗೆ ಶಾಸಕರ ಪ್ರಯತ್ನದಿಂದ ವಾಪಸ್ ಬಂದಿದೆ ಎಂದು ಗುಲಾಮಗಿರಿತನ ಪ್ರದರ್ಶಿಸಿದ್ದಾರೆ.ಶಾಸಕರ ಒಲೈಕೆಯಲ್ಲಿ ವಿದ್ಯಾಗಿರಿ ಕೈಗಾರಿಕೆ ಪ್ರದೇಶದ ಉದ್ಯಮಿಗಳು ತೊಡಗಿದ್ದಾರೆ ಎಂದು ಆರೋಪಿಸಿದರು.