ಗಣೇಶ ಚತುರ್ಥಿಗೆ ನಿರ್ಬಂಧ: ಶಾಂತತಾ ಸಮಿತಿ ಸಭೆ ಬಹಿಷ್ಕರಿಸಿದ ಮಹಾಮಂಡಳ

ಗಣೇಶ ಚತುರ್ಥಿಗೆ ಸರ್ಕಾರದ ನಿರ್ಬಂಧ ಜತೆಗೆ ಗಣೇಶೋತ್ಸವ ಮಹಾಮಂಡಳ ಪದಾಧಿಕಾರಿಗಳನ್ನು ಈ ಬಾರಿ‌ ಜಿಲ್ಲಾಡಳಿತ ಶಾಂತತಾ ಸಮಿತಿ ಸಭೆಗೆ ಆಹ್ವಾನಿಸಿಲ್ಲ. ಈ‌ ಎಲ್ಲ ಕಾರಣಗಳಿಂದ ಮಹಾಮಂಡಳ ಜಿಲ್ಲಾಡಳಿತ ಸಭೆಯನ್ನು ಬಹಿಷ್ಕರಿಸಿದೆ.

ಗಣೇಶ ಚತುರ್ಥಿಗೆ ನಿರ್ಬಂಧ: ಶಾಂತತಾ ಸಮಿತಿ ಸಭೆ ಬಹಿಷ್ಕರಿಸಿದ ಮಹಾಮಂಡಳ

ನಾಡನುಡಿ ನ್ಯೂಸ್
ಬಾಗಲಕೋಟೆ:
ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಬುಧವಾರ ಕರೆದಿದ್ದ ಶಾಂತತಾ ಸಮಿತಿ ಸಭೆಯಿಂದ ಬಾಗಲಕೋಟೆ ಗಜಾನನ ಉತ್ಸವ ಸಮಿತಿಗಳ ಮಹಾಮಂಡಳ ದೂರ ಉಳಿಯಿತು.

ಮಹಾಮಂಡಳದ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸದಿರುವುದು ಬಹಿಷ್ಕಾರಕ್ಕೆ ಮೊದಲ ಕಾರಣವಾದರೆ ಅತ್ತ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯನ್ನು ನಿರ್ಬಂಧಿಸಿದ್ದು, ಈ ನಿರ್ಧಾರಕ್ಕೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಮಹಾಮಂಡಳ ಕೂಡ ಇದಕ್ಕೆ ಆಕ್ಷೇಪ ಎತ್ತಿದ್ದು, ಸರ್ಕಾರ ತನ್ನ ನಿಲುವು ಬದಲಿಸಬೇಕೆಂದು ಒತ್ತಾಯಿಸಿದೆ.

ಇತ್ತೀಚೆಗೆ ನವನಗರ ಹಾಗೂ ಬಾಗಲಕೋಟರ ಸಿಪಿಐಗಳು ಸಭೆ ನಡೆಸಿದ್ದು, ಆ ಸಭೆಗೂ ಸಹ ಸರಿಯಾಗಿ ಮಂಡಳಿಗಳ ಪ್ರಮುಖರನ್ನು ಆಹ್ವಾನಿಸಿರಲಿಲ್ಲ. ಈಗಲೂ ಬೇಕಾಬಿಟ್ಟಿಯಾಗಿ ಕೆಲವು ಮಂಡಳಿಗಳ ಪದಾಧಿಕಾರಿಗಳನ್ನು‌ ಮಾತ್ರವೇ ಆಹ್ವಾನಿಸಿದ್ದಾರೆ. ಇನ್ನುಳಿದಂತೆ ನಮ್ಮ ಅಹವಾಲು ಕೇಳುವ ಸೌಜನ್ಯವೂ ಅಧಿಕಾರಿಗಳಿಗಿಲ್ಲ. ಹೀಗಾಗಿ ಸಭೆಯಿಂದ ದೂರ ಉಳಿದಿರುವುದಾಗಿ ಮಹಾಮಂಡಳ ತಿಳಿಸಿದೆ.

ಕೋವಿಡ್ ನಿಯಮಗಳನ್ನು ಅನುಸರಿಸಿಯೇ ನಾವು ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ಅನ್ನ ಸಂತರ್ಪಣೆ ಸೇರಿ ಜನಜಂಗುಳಿ ಉಂಟಾಗದಂತೆ ಕ್ರಮವಹಿಸುತ್ತೇವೆ ಎಂಬುದನ್ನು ತಿಳಿಸಿದ್ದೇವೆ. ಇಷ್ಟಿದ್ದೂ ನಮಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸಭೆಯಿಂದ ದೂರ ಉಳಿಯುತ್ತಿರುವುದಾಗಿ ಮುಖಂಡರು ತಿಳಿಸಿದ್ದಾರೆ.

ಮುಳುಗಡೆಯಿಂದಾಗಿ ಮೊದಲೇ ನಗರ ಸಾಂಸ್ಕೃತಿಕ ವೈಭವ ಕಳೆದುಕೊಂಡಿದೆ. ಈ ನಡುವೆ ಸರ್ಕಾರ ವರ್ಷದಿಂದ ವರ್ಷಕ್ಕೆ ಹಿಂದುಗಳ ಹಬ್ಬಗಳ ಮೇಲೆ ನಿರ್ಬಂಧ ವಿಧಿಸುತ್ತಿರುವುದು ಒಳ್ಳೆಯದಲ್ಲ. ಮತ್ತೊಂದು ಕಡೆ ನಮ್ಮ ಅಭಿಪ್ರಾಯ ಕೇಳದೆ ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರ ಕೈಗೊಂಡು ಅದನ್ನು ಜನರ ಮೇಲೆ ಹೇರಲು ಮುಂದಾಗುತ್ತಿದೆ. ಇದೆಲ್ಲದರ ಕಾರಣದಿಂದ ಸಭೆಯಿಂದ ದೂರ ಉಳಿದಿರುವುದಾಗಿ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮೇಲ್ನಾಡ ನಾಡನುಡಿಗೆ ತಿಳಿಸಿದ್ದಾರೆ.

ಸದ್ಯದಲ್ಲೇ ಎಲ್ಲ ಮಂಡಳಿಗಳ ಸಭೆಯನ್ನು ಕರೆಯಲಾಗುತ್ತಿದೆ. ನಗರದ ಎಲ್ಲ ಮಂಡಳಿಗಳನ್ನು ಒಳಗೊಂಡು ಮಹಾಮಂಡಳ ರಚಿಸಲಾಗಿದ್ದು, ಎಲ್ಲ ಮಂಡಳಿಗಳ ಅಭಿಪ್ರಾಯ ಸ್ವೀಕರಿಸಿ ಅದರಂತೆಯೇ ಹಬ್ಬ ಆಚರಿಸಲಾಗುತ್ತದೆ ಎಂದು ತಿಳಿಸಿದರು.