ಜೀವ,ಜೀವನ ಕಾಪಾಡುವಲ್ಲಿ ಆಡಳಿತದ ಪ್ರಯತ್ನ ಯಶಸ್ವಿ: ಗೋವಿಂದ ಕಾರಜೋಳ
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿದರು. ನಾಡಿಗೆ ಬಾಗಲಕೋಟೆ ಜಿಲ್ಲೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ನಾಡನುಡಿ ನ್ಯೂಸ್
ಬಾಗಲಕೋಟೆ:
ಕನ್ನಡ ರಾಜ್ಯೋತ್ಸವ ನಿಮಿತ್ತ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ಧ್ವಜಾರೋಹಣ ನೆರವೇರಿಸಿದರು.
ವಿವಿಧ ತಂಡಗಳ ಪಥಸಂಚಲನ ವೀಕ್ಷಿಸಿ ಗೌರವ ಸ್ವೀಕರಿಸಿದ ಅವರು ನಂತರ ನಾಡಿಗೆ ಜಿಲ್ಲೆ ನೀಡಿರುವ ಕೊಡುಗಡೆಗಳನ್ನು ಕೊಂಡಾಡಿದರು.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ ಮಧುಮೇಹ ತಜ್ಞ ಡಾ.ಅಶೋಕ ಸೊನ್ನದ, ಜಾನಪದ ಗಾರುಡಿಗ ಗುರುರಾಜ ಹೊಸಕೋಟೆ ಅವರನ್ನು ಅಭಿನಂದಿಸಿದರು.
ಬಾದಾಮಿ ಚಾಲುಕ್ಯರು, ಹಲಗಲಿ ಬೇಡರ ಹೋರಾಟದ ಇತಿಹಾಸವನ್ನು ಮರೆಯಬಾರದು. ಆ ಕಾಲದ ಸ್ಮಾರಕಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ವಿವಿಧತೆಯಲ್ಲಿ ಕನ್ನಡ ಏಕತೆಯನ್ನು ಕಂಡಿದೆ. ಸೌಹಾರ್ದತೆ, ಸಾಮರಸ್ಯದಿಂದ ನಾವೆಲ್ಲರೂ ಬದುಕಿ ಬಾಳಬೇಕಿದೆ. ನಾಡನುಡಿ ರಕ್ಷಣೆಗೆ ಸರ್ಕಾರ ಕಂಕಣ ಬದ್ಧವಾಗಿದೆ ಎಂದರು.
ಕೋವಿಡ್ ನಿಂದ ಮೊದಲೇ ಜನ ಜರ್ಝರಿತರಾಗಿದ್ದರು, ಅದಾದ ನಂತರ ಅತಿವೃಷ್ಟಿ ಮತ್ತಷ್ಟು ಆಘಾತ ನೀಡಿದೆ. ಜಿಲ್ಲೆಯ ೩೧ ಹಳ್ಳಿಗಳು ಇದರಿಂದಾಗಿ ಬಾಧಿತಗೊಂಡಿದ್ದು, ಜಂಟಿ ಸಮೀಕ್ಷೆ ಚಾಲ್ತಿಯಲ್ಲಿದೆ .೩೨೩ ಕುಟುಂಬಗಳಿಗೆ ತಲಾ ೧೦ ಸಾವಿರ ರೂ.ಗಳ ಪರಿಹಾರ ಒದಗಿಸಲಾಗಿದೆ ಎಂದು ವಿವರಿಸಿದರು.
ನಂತರ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.