ಬಾಗಲಕೋಟೆ ವಿದ್ಯಾರ್ಥಿನಿಗೆ ಮೋದಿ ಭಾವನಾತ್ಮಕ ಪತ್ರ

ಬಾಗಲಕೋಟೆ ವಿದ್ಯಾರ್ಥಿನಿಗೆ ಮೋದಿ ಭಾವನಾತ್ಮಕ ಪತ್ರ

ಬಾಗಲಕೋಟೆ: ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ  ತಾಯಿ ಹಿರಾಬೇನ್ ಅವರೊಂದಿಗಿನ ತಮ್ಮ ಚಿತ್ರವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಚಿತ್ರ ಬಿಡಿಸಿದ್ದ ವಿದ್ಯಾರ್ಥಿನಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. 


 ಏ.೨೯ರಂದು ಬಾಗಲಕೋಟೆಯ ನವನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಡಿಪ್ಲೊಮಾ ವಿದ್ಯಾರ್ಥಿನಿ ನಾಗರತ್ನ ಮೇಟಿ ಅವರು ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ತಾವು ಬಿಡಿಸಿದ್ದ ಚಿತ್ರ ಹೊತ್ತು ನಿಂತು ಮೋದಿ ಅವರ ಗಮನಸೆಳೆದಿದ್ದರು. ಚಿತ್ರ ಕಂಡು ಎಸ್‌ಪಿಜಿ ಕಮಾಂಡೋಗಳ ಬಳಿಯಿಂದ ಚಿತ್ರ ತರೆಸಿಕೊಂಡಿದ್ದ ಮೋದಿ ಅವರು ಅದರೊಂದಿಗೆ ಆಕೆಗೆ ಹೆಸರು, ವಿಳಾಸವನ್ನು ನೀಡುವಂತೆ ಕೋರಿದ್ದರು. ಸಮಾವೇಶ ನಡೆದ ೧೫ ದಿನದಲ್ಲಿ ನಾಗರತ್ನಾಗೆ ಮೋದಿ ಅವರಿಂದ ಪತ್ರ ತಲುಪಿದ್ದು, ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. 


 ನಾಗರತ್ನಾಗೆ ಬರೆದಿರುವ ಪತ್ರದಲ್ಲಿ ಸುಂದರವಾದ ಕಲಾಕೃತಿ ನೀಡಿದಕ್ಕೆ ಕೃತಜ್ಞತೆಗಳು. ಮನುಷ್ಯಮ ಭಾವನೆಗಳನ್ನು ಹಿಡಿದಿಡುವ, ಅದರ ಬೆಲೆಯನ್ನು ಅರಿಯುವ ಗುಣವನ್ನು ನಿಮ್ಮಲ್ಲಿ ಬಿತ್ತಿರುವ ನಿಮ್ಮ ಕುಟುಂಬಕ್ಕೂ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ. ಸಮಾವೇಶದಲ್ಲಿ ನಿಮ್ಮ ಕಲಾಕೃತಿಯು ಗಮನಸೆಳೆದಿದ್ದು, ಯುವಶಕ್ತಿಯಲ್ಲಿನ ಆಸಕ್ತಿಯನ್ನು ಪ್ರತಿನಿಧಿಸಿದೆ, ನವ ಭಾರತ ಮತ್ತು ಯುವ ಸಮೂಹಕ್ಕಾಗಿ ಮತ್ತಷ್ಟು ದುಡಿಯಲು ನನಗೆ ಈ ಘಟನೆ ಪ್ರೇರೇಪಣೆ ನೀಡಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕೆ ಶುಭಕೋರಿದ್ದಾರೆ. ಮೇ ೧೩ರ ಸೋಮವಾರ ಬೆಳಗ್ಗೆ ನಾಗರತ್ನಾ ಮೇಟಿ ಅವರ ಮನೆಗೆ ಪತ್ರ ತಲುಪಿದೆ.