ಕೋವಿಡ್‌ಗೆ ಜಿಲ್ಲೆಯಲ್ಲಿ ಮತ್ತೆ ಮೂವರು ಬಲಿ
* ಏಳು ಜನರಲ್ಲಿ ಕಾಣಿಸಿಕೊಂಡ ಸೋಂಕು
ನಾಡನುಡಿ ನ್ಯೂಸ್
ಬಾಗಲಕೋಟೆ ಜು.೧೨:
ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ಮೂವರು ಅಸುನೀಗಿದ್ದು, ಇದರಲ್ಲಿ ಇಬ್ಬರು ಕೋವಿಡ್‌ನಿಂದ ಅಸುನೀಗಿದ್ದು, ಖಚಿತಪಟ್ಟಿದ್ದರೆ, ಇನ್ನೋರ್ವ ವ್ಯಕ್ತಿಯ ಸಾವಿನ ಕಾರಣ ದ ಬಗ್ಗೆ ಪ್ರಯೋಗಾಲಯದ ವರದಿ ಬರಬೇಕಿದೆ.
ನವನಗರದ ೫೬ನೇ ಸೆಕ್ಟರ್‌ನ ೭೪ ವರ್ಷದ ವೃದ್ಧ ಪಿ-೩೧೩೫೮ ರವಿವಾರ ಬೆಳಿಗ್ಗೆ ಅಸುನೀಗಿದ್ದಾರೆ. ಇವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡು ಮೂರು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಕಾರಣ ಅವರಿಗೆ ಕಾಣಿಸಿಕೊಂಡ ಸೋಂಕಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದಿರುವುದರಿಂದ ಬೆಳಗ್ಗೆ ಕೊನೆಯುಸಿರೆಳೆದರು. ಕಲಾದಗಿ ಮೂಲದ ೪೫ ವರ್ಷದ ಕಿರಾಣಿ ವರ್ತಕ ಪಿ-೩೧೩೫೮ ಅವರು ಸಹ ಅಸುನೀಗಿದ್ದಾರೆ. ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ದಾಖಲಾಗಿದ್ದ ಅವರು ಮೃತಪಟ್ಟಿದ್ದಾರೆ.
ಮುಧೋಳದಲ್ಲಿ ೬೦ ವರ್ಷದ ವ್ಯಕ್ತಿ ಮನೆಯಲ್ಲೇ ಅಸುನೀಗಿದ್ದಾರೆ. ಮೂರು ದಿನಗಳ ಹಿಂದೆ ಅವರು ಮುಧೋಳದಲ್ಲಿ ವೈದ್ಯರ ತಪಾಸಣೆಗೆ ಒಳಪಟ್ಟಾಗ ಗಂಟಲು ಮಾದರಿಯನ್ನು ಪಡೆಯಲಾಗಿತ್ತು. ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿತ್ತು. ಆದರೆ ಅವರು ಆಂಬ್ಯುಲೆನ್ಸ್ನಲ್ಲಿ ಹೋಗಲು ನಿರಾಕರಿಸಿದ್ದರು. ಏಕಾಂಗಿಯಾಗಿ ಬಂದಿದ್ದ ಅವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ವೈದ್ಯರು ಹಿಂದೇಟು ಹಾಕಿದ್ದರು. ಮುಧೋಳಕ್ಕೆ ವಾಪಸ್ಸಾಗಿ ಮನೆಯಲ್ಲಿದ್ದ ಅವರು ಬೆಳಗ್ಗೆ ತೀವ್ರ ಅಸ್ವಸ್ಥರಾಗಿ ಅಸುನೀಗಿದ್ದಾರೆ. ಅದು ಇನ್ನೂ ಕೋವಿಡ್ ಕಾರಣ ಎಂಬುದು ಖಚಿತಪಟ್ಟಿಲ್ಲ. ಕೋವಿಡ್ ನಿಯಮಾವಳಿ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಮತ್ತೆ ಏಳು ಜನರಲ್ಲಿ ಸೋಂಕು ಪತ್ತೆ:
ರವಿವಾರ ಜಿಲ್ಲಾ ಕೇಂದ್ರ ಬಾಗಲಕೋಟೆಯ ಮೂವರು ಸೇರಿ ಒಟ್ಟು ಏಳು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಇದರಲ್ಲಿ ಶುಕ್ರವಾರ ಮೃತಪಟ್ಟ ತೋಟಗಾರಿಕೆ ವಿಶ್ವವಿದ್ಯಾಲಯದ ನೌಕರನಲ್ಲಿ ಸೋಂಕು ಇರುವುದನ್ನು ಖಚಿತಪಡಿಸಲಾಗಿದೆ. ಇನ್ನುಳಿದಂತೆ ವಿನಾಯಕನಗರದ ೬೫ ವರ್ಷದ ವ್ಯಕ್ತಿಗೆ ಸೋಂಕು ತಗಲಿದೆ. ಸೋಂಕಿತ ನವವಿವಾಹಿತ ಪಿ-೮೩೦೦ನ ಮದುವೆ ನಡೆದ ಪ್ರದೇಶದ ೫೦ ವರ್ಷದ ಮಹಿಳೆ, ಕುಳಗೇರಿನ ಕ್ರಾಸ್‌ನ ೩೭ ವರ್ಷದ ಯುವಕ, ಜಮಖಂಡಿ ತಾಲೂಕು ಹಿರೇಪಡಸಲಗಿಯ ೪೫ ವರ್ಷದ ವ್ಯಕ್ತಿ, ಬೀಳಗಿ ತಾಲೂಕು ಜಾನಮಟ್ಟಿಯ ೭೦ ವರ್ಷದ ವೃದ್ಧ ಉಸಿರಾಟದ ತೊಂದರೆ ಕಾರಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಜಿಲ್ಲಾಸ್ಪತ್ರೆಯ ಪ್ರಯೋಗಾಲಯದಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ವಿಜಯಪುರ ಜಿಲ್ಲೆಯ ವ್ಯಕ್ತಿ ಸಾವು
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೋಲಾರದ ೭೮ ವರ್ಷದ ವೃದ್ಧನೋರ್ವ ಉಸಿರಾಟದ ತೊಂದರೆ ಕಾರಣ ಜಿಲ್ಲಾಸ್ಪತ್ರೆಗೆ ಶನಿವಾರ ರಾತ್ರಿ ದಾಖಲಾಗಿ ಚಿಕಿತ್ಸೆಯ ವ್ಯವಸ್ಥೆ ಮಾಡುವ ಹೊತ್ತಿಗೆ ಅಸುನೀಗಿದ್ದಾನೆಂದು ತಿಳಿದು ಬಂದಿದೆ.
ತೋವಿವಿ ಸೀಲ್‌ಡೌನ್ ಇಂದು ತೀರ್ಮಾನ..!
ತೋಟಗಾರಿಕೆ ವಿಶ್ವವಿದ್ಯಾಲಯದ ನೌಕರ ಕೋವಿಡ್‌ಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಸ್ಯಾನಿಟೈಸರ್ ಸಿಂಪಡಸಿ ವಿವಿ ಆವರಣವನ್ನು ಸುರಕ್ಷಿತಗೊಳಿಸಲಾಗುತ್ತಿದೆ. ಇಲ್ಲಿರುವ ೪೦ ಸಿಬ್ಬಂದಿಯನ್ನು ವಿವಿ ಆವರಣದ ರೈತ ಕೇಂದ್ರದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಸೀಲ್‌ಡೌನ್ ಬಗ್ಗೆ ಯಾವುದೇ ತೀರ್ಮಾನಕೈಗೊಂಡಿಲ್ಲ.ಸೋಮವಾರ ಕಚೇರಿಗೆ ಬರುವಂತೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬೆಳಗ್ಗೆ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ವಿವಿ ಸೀಲ್‌ಡೌನ್‌ಗೊಳಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.