ಮುಂಗಾರು ಹಂಗಾಮಿಗೆ ಜು.೨೧ ರಿಂದ ನೀರು ಹರಿಸಲು ಕಾರಜೋಳ ಆದೇಶ
ಆಲಮಟ್ಟಿ ಜಲಾಶಯದಿಂದ ಮುಂಗಾರು ಹಂಗಾಮಿಗೆ ಜು.೨೧ ರಿಂದ ನೀರಾವರಿಗಾಗಿ ನೀರು ಹರಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದ್ದಾರೆ.
ನಾಡನುಡಿ ನ್ಯೂಸ್
ಬಾಗಲಕೋಟೆ ಜು.೧೩:
ಆಲಮಟ್ಟಿ ಜಲಾಶಯದಿಂದ ಮುಂಗಾರು ಹಂಗಾಮಿಗೆ ಜು.೨೧ ರಿಂದ ನೀರಾವರಿಗಾಗಿ ನೀರು ಹರಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದ್ದಾರೆ. ಜಲಾಶಯಕ್ಕೆ ಒಳಹರಿವು ಇರುವುದರಿಂದ ನೀರನ್ನು ಹರಿಸಬೇಕು. ಅದಕ್ಕಾಗಿ ಕಾಲವೇ ಜಾಗದ ಕ್ಲೋಸರ್ ಕಾಮಗಾರಿಗಳಿಗೆ ಅಂತಿಮ ಅಳತೆ, ಪರಿವೀಕ್ಷಣೆ ಹಾಗೂ ಕಾಮಗಾರಿಗಳನ್ನು ಜು.೨೦ರೊಳಗಾಗಿ ಪೂರ್ತಿಗೊಳಿಸಲು ಜಲಾಯಶಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಿಂಗಾರು ಹಂಗಾಮಿನ ೨೦೧೯-೨೦ರ ಒಟ್ಟು ಕ್ಷೇತ್ರಕ್ಕೆ ಮುಂಗಾರು ಹಂಗಾಮಿಗೆ ಯಾವುದೇ ಕ್ಷೇತ್ರ ಸೇರ್ಪಡೆ ಆಗಿಲ್ಲ. ೬.೫೯೦ ಲಕ್ಷ ಹೆಕ್ಟೇರ್ ಕ್ಷೇತ್ರದ ಶೇ.೮೦ ಕ್ಷೇತ್ರವನ್ನು ಮುಂಗಾರು ಹಾಗೂ ದ್ವಿಋತು ಹಂಗಾಮಿನ ಬೆಳೆಗಳನ್ನು ಬೆಳೆಯಲು ನೀರನ್ನು ಒದಗಿಸಲಾಗುವುದು. ಒಳಹರಿವು ಇರುವವರೆಗೆ ಕಾಲುವೆ ಜಾಗಕ್ಕೆ ಯಾವುದೇ ವಾರಾ-ಬಂದಿ ಅನುಸರಿಸದೇ ಸತತವಾಗಿ ಕಾಲುವೆ ಜಾಲಕ್ಕೆ ಈ ಹಿಂದೆ ನೀರು ಹರಿಸಲಾಗಿದೆ. ನಾರಾಯಣಪುರ ಜಲಾಶಯದ ಕಾಲುವೆ ಜಾಲಗಳಲ್ಲಿ ಹದಿನಾಲ್ಕು ದಿನ ಚಾಲು, ೮ ದಿನ ಬಂದ ಹಾಗೂ ಆಲಮಟ್ಟಿ ಜಲಾಶಯದ ಕಾಲುವೆ ಜಾಲಗಳಲ್ಲಿ ೮ ದಿನ ಚಾಲು ಹಾಗೂ ೭ ದಿನ ಬಂದ್ ಪದ್ಧತಿಯನ್ನು ಅನುಸರಿಸಿ ನೀರು ಹರಿಸಲಾಗುವುದು ಎಂದು ಅವರು ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟೆಣೆಯಲ್ಲಿ ತಿಳಿಸಿದ್ದಾರೆ.
ಆಲಮಟ್ಟಿ ಜಲಾಶಯದ ಒಳಹರಿವು ಸ್ಥಗಿತವಾದ ನಂತರ ಕೃಷ್ಣಾ ಮೇಲ್ದಂಡೆ ಯೋಜನೆಯ ಜಿಲ್ಲಾ ಪ್ರದೇಶಗಳಲ್ಲಿ ಕೋವಿಡ್-೧೯ರ ಸ್ಥಿತಿಯನ್ನು ಆಧರಿಸಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚಾಲು, ಬಂದ್ ಪದ್ಧತಿಯನ್ನು ಅನುಸರಿಸಲು ಚರ್ಚಿಸಲಾಗುವುದು ಅಲ್ಲಿಯವರೆಗೆ ಈಗ ಸೂಚಿಸಿರುವ ನಿಯಮವನ್ನು ಜಾರಿಗೊಳಿಸಬೇಕೆಂದು ಅವರು ಹೇಳಿದ್ದಾರೆ.
ಎರಡೂ ಜಲಾಶಯ ಸೇರಿ ೯೧.೦೦ ಟಿಎಂಸಿ ನೀರು ಎಂಡಿಡಿಎಲ್ ಮೇಲ್ಪಟ್ಟು ಬಳಕೆಗೆ ಲಭ್ಯವಿದ್ದು, ಈ ನೀರನ್ನು ಶೇ.೮೦ ಅಂದರೆ ೬.೨೨ಲಕ್ಷ ಹಾಗೂ ಕುಡಿಯುವ ನೀರು, ಕೈಗಾರಿಕೆ, ಹಿನ್ನೀರಿನ ಬಳಕೆ ಬಾಷ್ಟಿಕರಣಕ್ಕೆ ೧೨ ಟಿಎಂಸಿ ನೀರನ್ನು ನೀಡಲಾಗುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯವಾಗಿ ಬೇಕಾಗಿರುವ ೬೭ ಟಿಎಂಸಿ ನೀರು ಲಭ್ಯವಿರುವುದರಿಂದ ಈಗ ಕಾಲುವೆಗಳಿಗೆ ಹರಿಸಲು ಸೂಕ್ತವಾಗಿದ್ದು, ಸೂಚನೆಯನ್ನು ಕಾರ್ಯಗತಗೊಳಿಸಬೇಕೆಂದು ಕಾರಜೋಳ ಸೂಚಿಸಿದ್ದಾರೆ.