ಉತ್ತರಿ ಮಳೆಗೆ ಜಿಲ್ಲೆ ಅಕ್ಷರಶಃ ತತ್ತರ
ಕುಂಭದ್ರೋಣ ಉತ್ತರಿ ಮಳೆಗೆ ಬಾಗಲಕೋಟೆ ಜಿಲ್ಲೆ ಅಕ್ಷರಶಃ ತತ್ತರಗೊಂಡಿದೆ. ಜಿಲ್ಲೆಯ ರೌಂಡಪ್ ಇಲ್ಲಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ಜಿಲ್ಲಾದ್ಯಂತ ಸುರಿಯುತ್ತಿರುವ ಉತ್ತರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುಧೋಳದಲ್ಲಿ ಬೈಕ್ ಸವಾರನೋರ್ವ ಸೇತುವೆ ದಾಟುವ ವೇಳೆ ಕೊಚ್ಚಿ ಹೋಗಿರುವ ಘಟನೆ ಒಂದೆಡೆಯಾದರೆ, ಇತ್ತ ಒಂದೇ ದಿನ ಸುರಿದ ಮಳೆಗೆ ೭೪೩ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ೧೬ ಸೆಂ.ಮೀ.ಮಳೆ ಆಗಿದ್ದು, ಉತ್ತರಿ ನಕ್ಷತ ಮುಗಿಯುತ್ತಿದ್ದಂತೆ ಇತ್ತ ರವಿವಾರದಿಂದ ಹಸ್ತಾ ನಕ್ಷತ್ರದ ಮಳೆ ಆರಂಭಗೊಳ್ಳಲಿದೆ. ಈ ಮಳೆಯೂ ಸಹ ಅಷ್ಟೇ ಜೋರಾಗಿ ಬೀಳಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಭಾರೀ ಮಳೆಯಿಂದಾಗಿ ಮುಧೋಳದ ಒಂಟಗೋಡಿ ಸೇತುವೆ ದಾಟುತ್ತಿದ್ದ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಂತೋಷ ಅಡವಿ(೨೭) ಆಯತಪ್ಪಿ ಬಿದ್ದಿದ್ದು, ಹಳ್ಳದಲ್ಲಿ ಹರಿದು ಹೋಗಿದ್ದರಿಂದ ಮೃತಪಟ್ಟಿದ್ದಾನೆ.
ಬಾಗಲಕೋಟೆಯಲ್ಲಿ ೪೦, ಬೀಳಗಿ ೨೦, ಜಮಖಂಡಿ ೧೬, ಮುಧೋಳ ೩೪೩, ಹುನಗುಂದ ೩೦, ಇಳಕಲ್ ೨೩, ಬಾದಾಮಿ ೧೪೨, ಗುಳೇದಗುಡ್ಡ ೧೨೭ ಸೇರಿ ೭೪೩ ಮನೆಗಳು ಹಾನಿಯಾಗಿವೆ ಎಂದು ಮೂಲಗಳ ತಿಳಿಸಿವೆ.
ನದಿಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮನವಿ ಮಾಡಿದ್ದು, ಮಣ್ಣಿನ ಮನೆಗಳಲ್ಲಿ ವಾಸಿಸುವವರು ಸಹ ಮನೆ ತೊರೆದು ದೇವಸ್ಥಾನ, ಸಮುದಾಯ ಭವನಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆಯುವಂತೆ ಕೋರಿದ್ದಾರೆ.