ರಾಜಕೀಯ ಶಕ್ತಿಗಳಿಂದ ಹಿಜಾಬ್ ವಿವಾದ: ಬಾಗಲಕೋಟೆಯಲ್ಲಿ ಸಚಿವ ಈಶ್ವರಪ್ಪ ಕಿಡಿ
ನಾಡನುಡಿ ನ್ಯೂಸ್
ಬಾಗಲಕೋಟೆ:
ಉಡುಪಿ ಹಿಜಾಬ್ ವಿವಾದಕ್ಕೆ ಕಿಡಿಕಾರಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಒ ಕೆಲವು ರಾಜಕೀಯ ಶಕ್ತಿಗಳು ಇದನ್ನು ಬಳಸಿಕೊಳ್ಳುತ್ತಿವೆ ಎಂದಿದ್ದಾರೆ. ಶಿಕ್ಷಣದ ವಿಚಾರದಲ್ಲಿ ಧರ್ಮದ ವಿವಾದ ಹುಟ್ಟುಹಾಕಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗೆ ಮಕ್ಕಳು ಹೋಗುವುದು ಶಿಕ್ಷಣಕ್ಕಾಗಿಯೇ ವಿನಾ ಅಲ್ಲಿ ಧರ್ಮ ಯಾವುದು, ಧರ್ಮ ಏನು ಮಾಡಬೇಕು ಎನ್ನುವುದಕಲ್ಲ ಎಂದು ಹೇಳಿದರು.
ಜಾತಿ, ಧರ್ಮಗಳು ಶಾಲಾ-ಕಾಲೇಜಿಗೆ ಬಂದರೆ ದೊಡ್ಡ ಸಮಸ್ಯೆ ಆಗುತ್ತದೆ. ಶಾಲೆಯಲ್ಲಿದ್ದವರು ಎಲ್ಲರೂ ಒಂದೇ ಎಂಬುದರ ಸೂಚಕವಾಗೇ ಸಮವಸ್ತ್ರ ಜಾರಿಗೊಳಿಸಲಾಗಿರುತ್ತದೆ.ಎಲ್ಲರೂ ಸಮವಸ್ತ್ರ ಹಾಕಿಕೊಂಡರೆ ವಿವಾದವೇ ಇರಲ್ಲ ಎಂದರು.
ಬಿಜೆಪಿಯೊಂದಿಗೆ ಮುಸ್ಲಿಂರು:
ಬಿಜೆಪಿ ಜತೆಗೆ ಹಿಂದುಳಿದವರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೀಗ ಪಕ್ಷವನ್ನು ಬೆಂಬಲಿಸುವ ಮುಸ್ಲಿಂರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಸಚಿವರು ಹೇಳಿದರು.
ಮುಸ್ಲಿಂರನ್ನು ಕಾಂಗ್ರೆಸ್ ಪಕ್ಷ ಕೇವಲ ಮತಬ್ಯಾಂಕ್ ಆಗಿ ಬಳಸಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಈಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಿಂದೆ ಕಾಣಿಸಿಕೊಳ್ಳುತ್ತಿಲ್ಲ. ರಾಷ್ಟ್ರೀಯತೆಯನ್ನು ಒಪ್ಪುವ ಮುಸ್ಲಿಂರು ಬಿಜೆಪಿಗೆ ಬಂದರೆ ಸ್ವಾಗತಿಸಲಾಗುವುದು .ಸಿ.ಎಂ.ಇಬ್ರಾಹಿಂ ಅವರನ್ನು ಯಾವ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು.
ದೆಹಲಿಗೆ ಸಿಎಂ:
ರಾಜ್ಯದ ಅಭಿವೃದ್ಧಿ, ಮಂತ್ರಿ ಮಂಡಲ ವಿಸ್ತರಣೆ ಕುರಿತಾದ ಚರ್ಚೆಗಾಗಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದಾರೆ. ಸಿಎಂ ದೆಹಲಿಗೆ ತೆರಳುವುದಕ್ಕೆ ಯಾರದಾದರೂ ಅಪ್ಪಣೆ ಬೇಕಾ ಎಂದು ಪ್ರಶ್ನಿಸಿದರು.