ಜುಲೈ 1 ರಂದು ತೋವಿವಿಯ ಘಟಿಕೋತ್ಸವ : ಡಾ.ಇಂದಿರೇಶ

ಜುಲೈ 1 ರಂದು ತೋವಿವಿಯ ಘಟಿಕೋತ್ಸವ : ಡಾ.ಇಂದಿರೇಶ

ಬಾಗಲಕೋಟೆ:  ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಇದೇ ಜುಲೈ 1 ರಂದು ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಹೇಳಿದರು
           ತೋವಿವಿಯ ವಿಸ್ತರಣಾ ನಿರ್ದೇಶನಾಲಯದ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ನವದೆಹಲಿಯ ಕೃಷಿ ಅನುಸಂದಾನ ಭವನದ ಉಪ ಮಹಾನಿರ್ದೇಶಕ ಡಾ.ಉದಯ ಸಿಂಗ್ ಗೌತಮ್ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ರಾಜ್ಯ ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉಪಸ್ಥಿತರಿರುವರು ಎಂದರು.
           ಘಟಿಕೋತ್ಸವದಲ್ಲಿ 576 ಬಿಎಸ್ಸಿ ತೋಟಗಾರಿಕೆ ಮತ್ತು ಬಿಕೆಟ್ ವಿದ್ಯಾರ್ಥಿಗಳು, ಎಂ.ಎಸ್ಸಿ ಪದವಿಯಲ್ಲಿ ಬರುವ ತರಕಾರಿ, ಹಣ್ಣು ವಿಜ್ಞಾನ, ಪುಷ್ಪಕೃಷಿ ಹಾಗೂ ಉದ್ಯಾನ ವಿನ್ಯಾಸ, ನಡೆತೋಪು, ಮಸಾಲೆ, ಔಷಧಿ ಮತ್ತು ಸುಗಂಧೀಯ ಬೆಳೆಗಳು, ಕೊಯ್ಲೋತ್ತರ ತಂತ್ರಜ್ಞಾನ, ಸಸ್ಯ ರೋಗಶಾಸ್ತ್ರ, ಕೀಟಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ, ಅನುವಂಶಿಕ ಮತ್ತು ಸಸ್ಯ ತಳಿವೃದ್ದಿಶಾಸ್ತ್ರ ಮತ್ತು ಸಸ್ಯ ಜೈವಿಕ ತಂತ್ರಜ್ಞಾನಶಾಸ್ತ್ರಗಳಲ್ಲಿ ಉತ್ತೀರ್ಣರಾದ 114 ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುತ್ತಿದೆ ಎಂದರು.
           ಪಿಎಚ್‍ಡಿ ಪದವಿ ಕಾರ್ಯಕ್ರಮದಲ್ಲಿ ಬರುವ ತರಕಾರಿ, ಹಣ್ಣು ವಿಜ್ಞಾನ, ಪುಷ್ಪಕೃಷಿ ಹಾಗೂ ಉದ್ಯಾನ ವಿನ್ಯಾಸ, ನಡೆತೋಪು, ಮಸಾಲೆ ಸೇರಿದಂತೆ 9 ವಿಭಾಗಗಳಲ್ಲಿ 43 ವಿದ್ಯಾರ್ಥಿಗಳಿಗೆ ಹಾಗೂ ತೋಟಗಾರಿಕೆ ವಿವಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಹಾವಿದ್ಯಾಲಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಅರ್ಹ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮತ್ತು ದಾನಿಗಳ ಚಿನ್ನದ ಪದಕಗಳನ್ನು ನೀಡಲಾಗುತ್ತದೆ. ಅದರಂತೆ ಸ್ನಾತಕೋತ್ತರ ಪದವಿಯಲ್ಲಿ ಆಯಾ ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ 19 ಹಾಗೂ ದಾನಿಗಳ 50 ಸೇರಿ ಒಟ್ಟು 69 ಚಿನ್ನದ ಪದಕಗಳನ್ನು ಪ್ರಧಾನ ಮಾಡಲಾಗುತ್ತಿದೆ ಎಂದರು.
          ವಿಶ್ವವಿದ್ಯಾಲಯಕ್ಕೆ 9 ಜನ ಶಿಕ್ಷಣ ಪ್ರೇಮಿಗಳು ತಲಾ ಒಂದು ಲಕ್ಷ ರೂ.ಗಳ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯ ಹಣದಲ್ಲಿ ಯೋಗ್ಯ ಮತ್ತು ಪ್ರತಿಭಾವಂತ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 500 ರೂ.ಗಳ ಶಿಷ್ಯವೇತನ ನೀಡಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ 2349, ಎಂ.ಎಸ್ಸಿಯಲ್ಲಿ 241, ಪಿಎಚ್‍ಡಿಯಲ್ಲಿ 66 ಹಾಗೂ 2 ವರ್ಷದ ಡಿಪ್ಲೋಮಾದಲ್ಲಿ 54 ವಿದ್ಯಾರ್ಥಿಗಳು ಸೇರಿ ಒಟ್ಟು 2710 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶೇ.48.56 ರಷ್ಟು ಮಹಿಳಾ ವಿದ್ಯಾರ್ಥಿಗಳು ಇದ್ದಾರೆ. ಪ್ರಸ್ತುತ 305 ಶಿಕ್ಷಕ, 448 ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಿದರು.
             ವಿಶ್ವವಿದ್ಯಾಲಯವು ವಿದೇಶಿ ಹಾಗೂ ಇತರೆ ರಾಜ್ಯಗಳ ವಿದ್ಯಾರ್ಥಿಗಳನ್ನು ಕೂಡಾ ಆಕರ್ಷಿಸುತ್ತಿದೆ. 2021-22ನೇ ಸಾಲಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನಡೆಸುವ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಮ್ಮ ವಿಶ್ವವಿದ್ಯಾಲಯದ 38 ವಿದ್ಯಾರ್ಥಿಗಳು ಕಿರಿಯ ಸಂಶೋಧನಾ ಶಿಷ್ಯವೇತನ, 8 ವಿದ್ಯಾರ್ಥಿಗಳು ಹಿರಿಯ ಸಂಶೋಧನ ಶಿಷ್ಯವೇತನ ಹಾಗೂ 74 ವಿದ್ಯಾರ್ಥಿಗಳು ಎನ್‍ಟಿಎಸ್-ಪಿಜಿ ಶಿಷ್ಯವೇತನ ಸಹಿತ ತೇರ್ಗಡೆ ಹೊಂದಿ, ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದೇಶದ 7 ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಬಾಗಲಕೋಟೆ ತೋವಿವಿ ಕಿರಿಯ ಸಂಶೋಧನಾ ಶಿಷ್ಯವೇತನ ಪಡೆಯುವಲ್ಲಿ ಮೊದಲ ಸ್ಥಾನ ಗಳಿಸಿವೆ ಎಂದರು.
            ಪತ್ರಿಕಾಗೋಷ್ಟಿಯಲ್ಲಿ ತೋಟಗಾರಿಕೆ ವಿವಿಯ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಕುಲಸಚಿವ ಡಾ.ಟಿ.ಬಿ.ಅಳ್ಳೊಳ್ಳಿ, ಸ್ನಾತಕೋತ್ತರ ಡೀನ್ ರವೀಂದ್ರ ಮುಲಗೆ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ರಾಮಚಂದ್ರ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.