ಸಿದ್ದೇಶ್ವರ ಶ್ರೀಗಳು ದೇವಲೋಕದ ಪಾರಿಜಾತ

* ಆಧ್ಯಾತ್ಮಿಕ ಭಾವ ಸೃಷ್ಟಿಸಿದ ನುಡಿನಮನ, ಗೀತನಮನ * ಗಣ್ಯರು, ಸಂತರಿಂದ ಶ್ರೀಗಳಿಗೆ ಪುಷ್ಪಾಂಜಲಿ

ಸಿದ್ದೇಶ್ವರ ಶ್ರೀಗಳು ದೇವಲೋಕದ ಪಾರಿಜಾತ

ಬಾಗಲಕೋಟೆ: 
ಜ್ಞಾನಯೋಗಿಗೆ ನುಡಿನಮನ, ಗೀತನಮನ. ಅಲ್ಲಿ ಅನಾವರಣಗೊಂಡಿದ್ದು ಆಧ್ಯಾತ್ಮಿಕ ಭಾವ..! 

ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಗೆಳೆಯರ ಬಳಗ ಮತ್ತು 
ಜ್ಞಾನಯೋಗಿ ಶ್ರೀಸಿದ್ದೇಶ್ವರ ಸ್ವಾಮೀಜಿ ಅವರಿಗೆ ನುಡಿನಮನ, ಗೀತನಮನ ಸಲ್ಲಿಸಲು ನಗರದ ಚರಂತಿಮಠ ಶಿವಾನುಭವ ಕಲ್ಯಾಣಮಂಟಪದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡ ಕಾರ್ಯಕ್ರಮವು ಶ್ರೀಗಳ ಪ್ರವಚನದಲ್ಲಿ‌ ಕಂಡು ಬರುತ್ತಿದ್ದ ಆಧ್ಯಾತ್ಮಿಕ, ಭಕ್ತಿಯ ವಾತಾವರಣವನ್ನು ಅನಾವರಣಗೊಳಿಸಿತು.

ಕುಮಾರಿ ಶ್ರೇಯಾ ಜೋರಾಪುರ ಹಾಗೂ ಕುಮಾರಿ ಅದಿತಿ ಖಂಡೇಗಾಲ ಅವರ ತಂಡಗಳ ಲಯಬದ್ಧ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ನೆರೆದವೆನ್ನು ರೋಮಾಚಂನಗೊಳಿಸಿತು.

ನಂತರ ಶ್ರೀಗಳನ್ನು ಅರಿತವರಿಂದ ನುಡಿಮನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮೊದಲು‌ ಮಾತನಾಡಿದ ವಿಜಯಪುರ‌ ಜಿಲ್ಲಾ ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ವಾಸುದೇವ ಹೆರಕಲ್ಲ ಅವರು, ಜಗತ್ತಿನ ಎಲ್ಲ ಜ್ಞಾನ ಅರಿತಿದ್ದ ಸಿದ್ದೇಶ್ವರ ಶ್ರೀಗಳು ಅದನ್ನು ತಂದು ಸರಳ ಭಾಷೆಯಲ್ಲಿ ಭಕ್ತರಿಗೆ ಉಣ ಬಡಿಸಿದರು. ಪುರಂದರದಾಸರ ಹೇಳಿದಂತೆ ಶ್ರೀಗಳು ಹಕ್ಕಿಯಂತೆ ಅಂಗಳಕ್ಕೆ ಬಂದು ಮರಳಿದರು. ಯಾವುದನ್ನೂ ತಮ್ಮದು ಎನ್ನಲಿಲ್ಲ, ಬ್ಯಾಂಕ್ ಖಾತೆ ಹೊಂದಲಿಲ್ಲ, ಅವರ ಬಟ್ಟೆಗೆ ಜೇಬೂ ಇರಲಿಲ್ಲ ಇಂಥದೊಂದು ಜ್ಞಾನಜ್ಯೋತಿಯನ್ನು ಕಂಡ ನಾವುಗಳು ಧನ್ಯರು ಎಂದರು.

ಬೆಳಗಾವಿಯ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಜಿ.ಎ.ತಿಗಡಿ ಅವರು ಮಾತನಾಡಿ,  ಸಿದ್ದೇಶ್ವರ ಶ್ರೀಗಳು ನಿರ್ಮೋಹಿ ಆಗಿದ್ದರು ಅಲ್ಲಮರ ವಚನಗಳಂತೆ ಆದರ್ಶದ ಬದುಕು ಕಂಡರು ಸಾಂಸಾರಿಕ ಸುಖಕ್ಕಾಗಿ ಬಾವಿ ಅಗೆಯುತ್ತಿರುವ ನಾವುಗಳು ಯಾವ ಸುಖವನ್ನೂ ಕಾಣುವುದಿಲ್ಲ ಯಾಕಂದರೆ ಕಾಲವೆಂಬ ಜ್ವಾಲೆ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ ಅದನ್ನು ಅರಿಯಬೇಕೆಂಬುದನ್ನು ಶ್ರೀಗಳು ತೋರಿಸಿಕೊಟ್ಟಿದ್ದರು ಎಂದು ಹೇಳಿದರು.

ವಿಜಯಪುರ ‌ಅಕ್ಕಮಹಾದೇವಿ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಮಾತನಾಡಿ, ಶ್ರೀಗಳು ಸಮಯಪಾಲನೆ, ಶಿಸ್ತು ಎಂದೆಂದಿಗೂ ಮಾದರಿ, ವಿಜಯಪುರದಲ್ಲಿ ಅವರ ಪ್ರವಚನ ಕೇಳಲು ತೆರಳಿದರೆ ತಾವು ಕೆಳಗೆ ಕುಳಿತು ನನ್ನ ಬಳಿ ಮಾತನಾಡಿಸಿದರು. ಅಂಥ ಮೇರು ವ್ಯಕ್ತಿತ್ವ ಕಂಡ ನಾವುಗಳು ಪಾವನರು, ಅವರಷ್ಟು ಎತ್ತರಕ್ಕೆ ಯಾರೂ ಬೆಳೆಯಲು ಸಾಧ್ಯವಿಲ್ಲವಾದರೂ ಅವರಲ್ಲಿನ ಸಣ್ಣ ಬಿಂದುಗಳನ್ನಾದರೂ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕೆಂದರು.

ಚರಂತಿಮಠದ ಶ್ರೀಪ್ರಭುಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಪ್ರಮುಖ ಗುರು ಶ್ರೀಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗಂದಿಗವಾಡದ ಶ್ರೀಮೃತ್ಯುಂಜಯಸ್ವಾಮೀಜಿ  ಮಾತನಾಡಿದರು. ಬವಿವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಗೆಳೆಯರ ಬಳಗದ ಅಧ್ಯಕ್ಷ ಎಂ.ಎಂ.ಹಂಡಿ ಸ್ವಾಗತಿಸಿದರು.‌ಬಸವರಾಜ ಭಗವತಿ ಕಾರ್ಯಕ್ರಮ ನಿರೂಪಿಸಿದರು.

ಬವಿವ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ,ಹಿರಿಯ ತಜ್ಞ ಡಾ. ಆರ್.ಟಿ.ಪಾಟೀಲ,  ಸಂಘದ ಸದಸ್ಯರಾದ ಗುರುಬಸವ ಸೂಳಿಭಾವಿ, ಮಹಾಂತೇಶ ಶೆಟ್ಟರ, ಜಿ.ಎನ್.ಪಾಟೀಲ, ಸಿದ್ದರಾಮ ಮನಹಳ್ಳಿ, ಪಂಡಿತ್ ಅರಬ್ಬಿ‌ ಇತರರು ಕಾರ್ಯಕ್ರಮದಲ್ಲಿದ್ದರು

ಸಿದ್ದೇಶ್ವರ ಶ್ರೀಗಳಂತೆ ಯಾರೂ ಇರಲಿಲ್ಲ. ಅವರು ಎಲ್ಲರಂತೆ ಬರಲಿಲ್ಲ, ಎಲ್ಲರಂತೆ ಇರಲಿಲ್ಲ, ಎಲ್ಲರಂತೆ ಹೊರಡಲಿಲ್ಲ ಅದಕ್ಕಾಗಿಯೇ ಅವರು ಜ್ಞಾನಯೋಗಿ ಆದರು. ಎಲ್ಲ ಜ್ಞಾನ ಸಂಪಾದಿಸಿಯೂ ಮುಕ್ತರಾಗಿ ಹೋದರು

| ವೀರಣ್ಣ ಚರಂತಿಮಠ, ಕಾರ್ಯಾಧ್ಯಕ್ಷ ರು, ಬವಿವ ಸಂಘ, ಬಾಗಲಕೋಟೆ