ಹಿಂದುತ್ವದ ವಾರಸ್ದಾರರು ಎನ್ನುವವರು ರಾಜೀನಾಮೆ ನೀಡಿ ಹೋರಾಟಕ್ಕೆ ಬನ್ನಿ: ಶಾಸಕರಿಗೆ ಜಗದೀಶ ಕಾರಂತ ಸವಾಲ್
ಕೆರೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಹಿಂದೂ ಜಾಗರಣ ವೇದಿಕೆ ಮುಖ್ಯಸ್ಥ ಜಗದೀಶ ಕಾರಂತ ಅವರು ಬಿಜೆಪಿ ಶಾಸಕರುಗಳಿಗೆ ರಾಜೀನಾಮೆ ನೀಡಿ ಹೋರಾಟದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ.

ಬಾಗಲಕೋಟೆ:
ಕರೂರು ಪಟ್ಟಣದಲ್ಲಿನ ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯ, ಬಂಧನ ಖಂಡಿಸಿ ಹಿಂಜಾವೇ ನಡೆಸಲಿರುವ ಹೋರಾಟದಲ್ಲಿ ತಮ್ಮನ್ನು ತಾವು ಹಿಂದುತ್ವದ ವಾರಸುದಾರರು ಎಂದು ಹೇಳಿಕೊಳ್ಳುವ ಶಾಸಕರು ಪಕ್ಷ ಹಾಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಭಾಗವಹಿಸಬೇಕೆಂದು ಹಿಂಜಾವೇ ವರಿಷ್ಠ ಜಗದೀಶ ಕಾರಂತ ಕರೆ ನೀಡಿದ್ದಾರೆ.
ಕರೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗಣೇಶ ಭಕ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗೌರವಸ್ಥ ಕುಟುಂಬದ ಯುವಜರನ್ನು ಕೀಳಾಗಿ ನಡೆಸಿಕೊಂಡು ಅವರ ಮೇಲೆ ದೌರ್ಜನ್ಯ ಎಸೆಗಿರುವ ಅಧಿಕಾರಿಗಳ ಮೇಲೆ ಕ್ರಮ ಆಗಲೇಬೇಕು. ಹೋರಾಟದಲ್ಲಿ ಯಾರ ಸ್ವಾರ್ಥವೂ ಇಲ್ಲ. ಘಟನೆಯಲ್ಲಿ ಭಾಗಿಯಾಗದ ನಿರಪರಾಧಿಗಳನ್ನು ಶಿಕ್ಷಿಸಿರುವುದನ್ನು ಖಂಡಿಸುವುದಷ್ಟೇ ನಮ್ಮ ಉದ್ದೇಶ ಎಂದರು.
ಇದಕ್ಕಾಗಿ ಹಂತ ,ಹಂತವಾಗಿ ಹೋರಾಟ ನಡೆಯಲಿದ್ದು, ಜಿಲ್ಲೆ ಎಲ್ಲ ಶಾಸಕರು ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.ಅದರಲ್ಲೂ ಹಿಂದುತ್ವದ ವಾರಸುದಾರರು ಎಂದು ಹೇಳಿಕೊಳ್ಳುವ ಶಾಸಕರು ಭಾಗಿಯಾಗಬೇಕು. ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಎಚ್ಚರ ಗೊಂಡಿರುವ ಸಮಾಜವೇ ತಕ್ಕ ಉತ್ತರವನ್ನು ನೀಡಲಿದೆ ಎಂದು ಎಚ್ಚರಿಕೆ ನೀಡಿದರು.
ಆಹೋರಾತ್ರಿ ಧರಣಿಗೆ ತೀರ್ಮಾನ
ಅ.೮ ಅಥವಾ ಅ.೧೦ ರಿಂದ ನವನಗರದ ಜಿಲ್ಲಾಡಳಿತ ಭವನದೆದುರು ಆಹೋರಾತ್ರಿ ಧರಣಿ ಆರಂಭಿಸಲು ಹಿಂದೂ ಜಾಗರಣ ವೇದಿಕೆ ಚಿಂತನೆ ನಡೆಸಿದೆ. ಅ.೯ರಂದು RSS ಪಥಸಂಚಲನದ ಹಿನ್ನೆಲೆಯಲ್ಲಿ ಬಹುತೇಕ ಅ.೧೦ರಿಂದ ಹೋರಾಟ ಆರಂಭಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ.