ಬಿಟಿಡಿಎಗೆ ವಿಸಿಸಿ ಸಾರಥ್ಯ: ಮೂರನೇ ಯುನಿಟ್,ಪುನರ್ವಸತಿ ಕಾರ್ಯಕ್ಕೆ ವೇಗದ ನಿರೀಕ್ಷೆ 

* ಎರಡನೇ ಬಾರಿಗೆ ನೇತೃತ್ವದ ವಹಿಸಿದ ಡಾ.ಚರಂತಿಮಠ  * ಯಳ್ಳಿಗುತ್ತಿ, ನಾಡಗೌಡ, ಟವಳಿ ಸದಸ್ಯರಾಗಿ ನೇಮಕ 

     ಬಿಟಿಡಿಎಗೆ ವಿಸಿಸಿ ಸಾರಥ್ಯ: ಮೂರನೇ ಯುನಿಟ್,ಪುನರ್ವಸತಿ ಕಾರ್ಯಕ್ಕೆ ವೇಗದ ನಿರೀಕ್ಷೆ 


ಬಾಗಲಕೋಟೆ ಜು.೨೪
ನವನಗರ ಮೂರನೇ ಹಂತದ ಅಭಿವೃದ್ಧಿ, ಪೂರ್ಣಸ್ಥಳಾಂತರದ ಜನರ ಬೇಡಿಕೆಯ ಈಡೇರಿಸಬೇಕಾದ ಹೊಣೆಹೊತ್ತಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗ ಶಾಸಕ ಡಾ.ವೀರಣ್ಣ ಚರಂತಿಮಠ ಸಾರಥ್ಯ. ಸಮಸ್ಯೆ ನಿಭಾಯಿಸುವ ಸಮರ್ಥ ನೇಮಕ.
 ರಾಜ್ಯ ಸಚಿವರ ಸಮಾನ ಹುದ್ದೆಯಾಗಿರುವ ಸಭಾಪತಿ ಹುದ್ದೆ ಅತ್ಯಂತ  ದೊಡ್ಡ ಜವಾಬ್ದಾರಿ. ಈ ಹಿಂದೊಮ್ಮೆ ಅಲ್ಪಾವಧಿಗೆ ಸಭಾಪತಿ ಆಗಿದ್ದ ಅವರು ಈಗ ಶಾಸಕ ಅವಧಿಯ ಪೂರ್ಣ ಅವಧಿಯನ್ನು ನಿಭಾಯಿಸಲಿದ್ದಾರೆ. ನವನಗರದ ಇಂಚಿAಚು ಪ್ರದೇಶದ ಬಗ್ಗೆ ಕರಾರುವಕ್ಕಾದ ಮಾಹಿತಿ, ಮುಳುಗಡೆ ಆಗುವ ನಗರದ ಪೂರ್ಣ ಸಮಸ್ಯೆಯ ಅರಿವು ಹೊಂದಿರುವ ಅವರಿಗೆ ನವನಗರ ಕೇವಲ ಸಂತ್ರಸ್ತರ ಪುನರ್ವಸತಿ ಪ್ರದೇಶವಾಗಬಾರದು. ಅದು ವಾಣಿಜ್ಯ ಪ್ರದೇಶವಾಗಿಯೂ ಅಭಿವೃದ್ಧಿ ಆಗಬೇಕೆಂಬ ಕನಸು ಕಂಡವರು. ೨೦೧೩ರಲ್ಲಿ ಅವರದೇ ಸರ್ಕಾರ ಬಂದಿದ್ದರೆ ಅದು ಸಾಕಾರಗೊಳ್ಳುವ ಸಾಧ್ಯತೆಯಿತ್ತು. ಈ ಐದು ವರ್ಷದಲ್ಲಿ ಆಲಮಟ್ಟಿ ಜಲಾಶಯ ಎತ್ತರಿಸುವ ವಿಳಂಬ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ, ಪರಿಹಾರ ಧನದ ವಿವಾದಗಳಿಂದಾಗಿ ಕಳೆದ ಏಳು ವರ್ಷದ ಅವಧಿಯಲ್ಲಿ ಆಲಮಟ್ಟಿ ಜಲಾಶಯವೂ ಹಿನ್ನಡೆ ಅನುಭವಿಸಿದೆ, ನವನಗರದ ಸ್ಥಳಾಂತರಕ್ಕೂ ವಿಳಂಬವಾಗಿದೆ. 


 ಈ ವಿಳಂಬವನ್ನು ಸರಿದೂಗಿಸಬೇಕಾದ ಸಂದರ್ಭದಲ್ಲಿ ಡಾ.ಚರಂತಿಮಠ ಅವರು ನೇಮಕಗೊಂಡಿದ್ದಾರೆ. ಕೋವಿಡ್ ಸಂಕಷ್ಟದ ಆರ್ಥಿಕ ಹಿಂಜರಿತ ಬಹಳಷ್ಟು ಸಮಸ್ಯೆ ಸೃಷ್ಠಿಸಲಿದೆ. ಆಲಮಟ್ಟಿ ಜಲಾಶಯವನ್ನು ಎತ್ತರಿಸುವ, ಪುನರ್ವಸತಿ ಇತ್ಯರ್ಥಪಡಿಸುವ ಕಾರ್ಯಕ್ಕಾಗಿ ಮುಂಗಡಪತ್ರದಲ್ಲಿ ೧೦ ಸಾವಿರ ಕೋಟಿ ರೂ.ಒದಗಿಸುವ ಮುಖ್ಯಮಂತ್ರಿ ಯಡಿಯೂರಪ್ಪನವರ ಬದ್ಧತೆ ಕಾರ್ಯರೂಪಕ್ಕೆ ಬಂದರೆ ಮಾತ್ರ ನವನಗರ ಒಂದು ಹಂತ ತಲುಪಲು ಸಾಧ್ಯವಿದೆ. 
 ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಆಯುಕ್ತರ ಹುದ್ದೆ ಕೂಡ ಖಾಲಿಯಾಗಿದೆ. ಈಗ ಶಿವಯೋಗಿ ಕಳಸದ ಅವರು ಪ್ರಭಾರಿ ಹುದ್ದೆಯಲ್ಲಿ ನೇಮಕಗೊಂಡಿದ್ದಾರೆ. ಅವರಿಗೂ ಪುನರ್ವಸತಿ ಬಗ್ಗೆ ಪೂರ್ಣ ಅರಿವಿದ್ದು, ಈಗ ಚರಂತಿಮಠ ಅವರ ನೇಮಕ, ಕಳಸದ ಅವರ ಜವಾಬ್ದಾರಿ ಸಮನ್ವಯಗೊಳ್ಳಲು ಕಾಲಪಕ್ವವಾಗಿದೆ. 
 ಮೂರನೇ ಹಂತದ ನವನಗರ ಅಭಿವೃದ್ಧಿ, ಅದಕ್ಕೆ ಬೇಕಾಗಿರುವ ಭೂಸ್ವಾಧೀನ, ಬಾಡಿಗೆದಾರರು, ಸಂತ್ರಸ್ತರ ಅವಲಂಭಿತರಿಗೆ ನಿವೇಶನ ಹಂಚಿಕೆ ಬಗ್ಗೆ ಸಾಕಷ್ಟು ಅಪಸ್ವರಗಳಿವೆ. ಪ್ರಾಧಿಕಾರದಲ್ಲಿ ಮಧ್ಯವರ್ತಿಗಳ ಕಿರಿಕಿರಿ ಇದೆ ಎಂಬ ಆರೋಪವೂ ಕೇಳಿ ಬಂದಿದೆ. ಅದೆಲ್ಲವನ್ನೂ ಸರಿಪಡಿಸಿ ಸಂತ್ರಸ್ತರ ಅಹವಾಲುಗಳಿಗೆ ತಕ್ಷಣ ಸ್ಪಂದನೆ ಸಿಗುವ, ನವನಗರ ನೈರ್ಮಲ್ಯ ಮುಂತಾದ ಸಮಸ್ಯೆಗಳು ಇತ್ಯರ್ಥಗೊಳ್ಳಬೇಕಾದ ಅಗತ್ಯವಿದ್ದು, ಡಾ.ಚರಂತಿಮಠ ಅವರು ಈ ಸವಾಲನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಾಧಿಕಾರದ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಮೋಹನ ನಾಡಗೌಡ, ಎರಡನೇ ಬಾರಿಗೆ ಸದಸ್ಯರಾಗಿ ನೇಮಕಗೊಂಡಿರುವ ಕುಮಾರ ಯಳ್ಳಿಗುತ್ತಿ, ವಕೀಲ ಶಿವಾನಂದ ಟವಳಿ ಅವರನ್ನು ಒಳಗೊಂಡಿರುವ ತಂಡ ಸಮನ್ವಯ ಸಾಧಿಸುವ ನಿರೀಕ್ಷೆಯಿದೆ. 

       


ಮಾಜಿ ಶಾಸಕರ ಪುತ್ರರಿಬ್ಬರು :ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡಿರುವ ಮೋಹನ ನಾಡಗೌಡರ ಅವರು ಮಾಜಿ ಸಚಿವ, ಬಾಗಲಕೋಟೆಯ ಹಿರಿಯ ಚೇತನ ದಿವಂಗತ ಪಿ.ಎಂ.ನಾಡಗೌಡ ಅವರ ಪುತ್ರ, ಇನ್ನೊರ್ವ ಸದಸ್ಯ ಕುಮಾರ ಯಳ್ಳಿಗುತ್ತಿ ಅವರು ಬೀಳಗಿ ಮಾಜಿ ಶಾಸಕ ಜಿ.ಜಿ.ಯಳ್ಳಿಗುತ್ತಿ ಅವರ ಪುತ್ರ. 

        
ಅಭಿನಂದನೆಗಳ ಸುರಿಮಳೆ :ಶಾಸಕ ಡಾ.ವೀರಣ್ಣ ಚರಂತಿಮಠ ಅವರ ನೇಮಕದ ಆದೇಶ ಹೊರಬೀಳುತ್ತಿದ್ದಂತೆ ಅವರನ್ನು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಭಿನಂದಿಸಿದ್ದಾರೆ. ಶಾಸಕರ ನಿವಾಸ, ಬವಿವ ಸಂಘದ ಕಚೇರಿಯತ್ತ ಬಂದಿದ್ದ ಅಭಿಮಾನಿಗಳನ್ನು ಸಾಮಾಜಿಕ ಅಂತರ, ಮಾಸ್ಕ್ ಧರಿಸಲು ಕಡ್ಡಾಯ ಸೂಚನೆ ನೀಡಿದ ಅವರು ನಿಮ್ಮ ಅಭಿನಂದನೆಗಳಿಗೆ ನಾನು ಕೃತಜ್ಞ ಆದರೆ ಕೋವಿಡ್ ಸಂದರ್ಭದಲ್ಲಿ ಯಾವ ಸಂಭ್ರಮಾಚರಣೆ ಬೇಡ. ನನ್ನ ಜವಾಬ್ದಾರಿಯನ್ನು ಅತ್ಯಂತ ಆತ್ಮವಿಶ್ವಾಸದಿಂದ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.