ಸರ್ಕಾರದ ವಿರುದ್ಧವೇ ಸಿಡಿದೆದ್ದ ಹಿಂಜಾವೇ..!‌ ಮುಂದೇನು?

ಗಣೇಶ ಭಕ್ತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿರುವ ಹಿಂದೂ ಜಾಗರಣ ವೇದಿಕೆ ಸಂಘಟನೆ ವರಿಷ್ಠ ಜಗದೀಶ ಕಾರಂತ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ತೀರ್ಮಾನಿಸಿದೆ ಈ ಕುರಿತಾದ ಬೆಳವಣಿಗೆಗಳ ಕುರಿತಾದ ವರದಿ ಇಲ್ಲಿದೆ ಓದಿ

ಸರ್ಕಾರದ ವಿರುದ್ಧವೇ ಸಿಡಿದೆದ್ದ ಹಿಂಜಾವೇ..!‌ ಮುಂದೇನು?

ಬಾಗಲಕೋಟೆ:
ಕೆರೂರು ಗಣೇಶ ಭಕ್ತರ ಬಂಧನ, ದೌರ್ಜನ್ಯ ಖಂಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಲವು ಸುತ್ತಿನ ಹೋರಾಟ ನಡೆಸಿರುವ ಹಿಂದೂ ಜಾಗರಣ ವೇದಿಕೆ‌ ಇದೀಗ ಧರಣಿ ಸತ್ಯಾಗ್ರಹ ಆರಂಭಿಸಲು ತೀರ್ಮಾನಿಸಿದೆ.

ಅ.೧೦ರಿಂದ ಡಿವೈಎಸ್ಪಿ ಪ್ರಶಾಂತ ಮನೊಳಿ, ಸಿಪಿಐ ಕರಿಯಪ್ಪ ಬನ್ನಿ ಸೇರಿ ಇತರ ಅಧಿಕಾರಿಗಳನ್ನು ವಜಾಗೊಳಿಸಲು ಸಂಘಟನೆ ಆಗ್ರಹಿಸಿದ್ದ ತನ್ನ ಬೇಡಿಕೆ‌ ಈಡೇರಿಸದ ಸರ್ಕಾರದ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ಮುಂದಾಗುತ್ತಿದೆ.

(ಹೋರಾಟದ ಪ್ರಯುಕ್ತ ಸಂಘಟನೆ ಬಿಡುಗಡೆಗೊಳಿಸಿರುವ ಪೋಸ್ಟರ್)

ಪರಿವಾರದ ಸಂಘಟನೆಯೊಂದು ತನ್ನದೇ ಪಕ್ಷದ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದು, ಬಿಜೆಪಿಗೆ ಇದು ನುಂಗಲಾರದ ತುಪ್ಪವಾಗಿ ಪರಿಣಮಿಸುವುದು ನಿಶ್ಚಿತವಾಗಿದೆ.

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಿಪಿಐ ಕರಿಯಪ್ಪ ಬನ್ನಿ ಅವರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆದರೆ ಘಟನೆಯಲ್ಲಿ ಭಾಗಿಯಾಗದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಶರಣು ಸಜನ ಸೇರಿ ಇತರರನ್ನು ಬಂಧಿಸಿ ಪೊಲೀಸರು ಚಿತ್ರಹಿಂಸೆ ನೀಡಿರುವ ಆರೋಪ ಕೇಳಿ ಬಂದಿತ್ತು. ನಂತರ ಶರಣು ಸಜ್ಜನ ಅವರ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸಂಘಟನೆ ಆಗ್ರಹಿಸಿತ್ತು. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಸಂಘಟನೆ ಮುಂದಾದಾಗ ಡಿವೈಎಸ್ಪಿ ಪ್ರಶಾಂತ ಮುನೊಳಿ ಅವರ ಜತೆಗೆ ವಾಗ್ವಾದ ಉಂಟಾಗಿತ್ತು.

ನಂತರ ಒಂದು ವಾರದ ಗಡವು ನೀಡಿದ್ದ ಸಂಘಟನೆ ಸೀದಾ ಕೆರೂರು ಚಲೋ ನಡೆಸಿ ಘಟನೆಯಲ್ಲಿ ಭಾಗಿಯಾಗದ ಶರಣು ಸಜ್ಜನ ಸೇರಿ ಇತರ ಗಣೇಶ ಭಕ್ತರನ್ನು ಗುರಿಯಾಗಿಸಿ  ಅವರಿಗೆ ಚಿತ್ರಹಿಂಸೆ ನೀಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಮನೆಗೆ ಕಳುಹಿಸುವ ವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿತ್ತು.

ಅದಕ್ಕೂ ಸರ್ಕಾರ ಜಗ್ಗದಿದ್ದಾಗ ಅಹೋರಾತ್ರಿ ಧರಣಿಗೆ ತೀರ್ಮಾನಿಸಿದ್ದು, ಮೊದಲ ದಿನ ಜಿಲ್ಲಾಡಳಿತ ಭವನದೆದುರು ಪ್ರತಿಭಟನೆ ನಡೆಸಿ ನಂತರ ಬಸವೇಶ್ವರ ವೃತ್ತದಲ್ಲಿ ಧರಣಿ ನಡೆಸಲು ತೀರ್ಮಾನಿಸಿದೆ.

ಬೇರು ಮಟ್ಟದಿಂದ ಸಂಘಟನೆ ಕಟ್ಟಿರುವ, ಸಂಘದಲ್ಲಿ ವರ್ಚಸ್ಸು ಹೊಂದಿರುವ ಹಿರಿಯ ಪ್ರಚಾರಕ, ಹಿಂದೂ ಜಾಗರಣ ವೇದಿಕರ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತರೇ ಸ್ವತಾ ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಸರ್ಕಾರ ತನ್ನ ವಾದಕ್ಕೆ ಮನ್ನಣೆ ನೀಡದೆ ನಿರ್ಲಕ್ಷಿಸಿರುವುದರಿಂದ ಸಹಜವಾಗಿಯೇ ಅವರು ಸರ್ಕಾರದ ವಿರುದ್ಧ ಗುಡುಗಲಿದ್ದಾರೆ.

ಇದಲ್ಲದೇ ಬಿಜೆಪಿ ನಮ್ಮ ಸರ್ಕಾರ ಎಂದು ನಾವು ಹೇಳಿಲ್ಲ ಹಿಂದುತ್ವ ಸರ್ಕಾರ ಇದು ಎಂದು ಆಡಳಿತದಲ್ಲಿ ಇರುವವರು ಹೇಳುತ್ತಿದ್ದಾರೆ. ಇವರುಗಳು ಹಿಂದುತ್ವದ ವಾರಸುದಾರರಾಗಿದ್ದರೆ ರಾಜೀನಾಮೆ ನೀಡಿ ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಲಿ ಎಂದು ಹಿಂಜಾವೇ ಮುಖಂಡರು ಶಾಸಕರುಗಳಿಗೆ ಸವಾಲು ಹಾಕಿದ್ದು, ಹೋರಾಟ ಯಾವ ರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.

(ಜಗದೀಶ ಕಾರಂತ)

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯುವಕರು ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸಿದ್ದರೆ ಅದಕ್ಕೆ ಸಮರ್ಥನೆ ಇಲ್ಲ.ಆದರೆ ಘಟನೆಯಲ್ಲಿ ಭಾಗಿಯಾಗದವರನ್ನೂ ಷಡ್ಯಂತ್ರದ ಮೂಲಕ ಸಿಲಿಕಿಸಲಾಗಿದೆ‌‌. ಅದನ್ನು ನೋಡಿದರೆ ಹಿಂದೆ ಕಾಣದ ಕೈ ಗಳು ಕೆಲಸ ಮಾಡಿರುವ ಅನುಮಾನ ಮೂಡುತ್ತದೆ ಎಂದು ಸಂಘಟನೆ ಮುಖಂಡರು ಸುದ್ದಿಗೋಷ್ಠಿಗಳನ್ನು ನಡೆಸಿದಾಗ ಆರೋಪಿಸಿದ್ದಾರೆ.

ಮೊದಲ ಹಂತದಲ್ಲಿ ಧರಣಿ, ನಂತರ ಶಾಸಕರುಗಳ‌ ಮನೆಗಳಿಗೆ ಮುತ್ತಿಗೆ ಅದಕ್ಕೂ ಜಗ್ಗದಿದ್ದರೆ ಮುಖ್ಯಮಂತ್ರಿ, ಗೃಹ ಮಂತ್ರಿ‌ನಿವಾಸಕ್ಕೆ ಮುತ್ತಿಗೆ ಅದಕ್ಕೂ ಜಗದಿದ್ದರೆ ಆತ್ಮ ಅರ್ಪಣೆ ನಮ್ಮ ಅಂತಿಮ ಹೋರಾಟ ಎಂದು ಇತ್ತೀಚೆಗೆ ಸಂಘಟನೆ ಮುಖಂಡ ಅಯ್ಯನಗೌಡರ ಹೇರೂರ ಎಚ್ಚರಿಸಿದ್ದರು.