ಉಸ್ಮಾನಗಣಿ ದೇಶದ್ರೋಹದ ಮಾತೇ ಆಡಿಲ್ಲ ಕರವೇ ಜಿಲ್ಲಾಧ್ಯಕ್ಷ ಬದ್ನೂರ..!

ನಾವೆಲ್ಲ ಒಂದೇ ತಾಯಿಯ ಮಕ್ಕಳೆಂದು ಸಾರುವ ಭಾರತ ಮಾತೆಯ ಜೈಕಾರಕ್ಕೂ ಕೆಲವರು ಆಕ್ಷೇಪ ಎತ್ತಿದ್ದಾರೆ. ಇತ್ತೀಚೆಗೆ ಎಂಐಎಂ ಅಧ್ಯಕ್ಷ ಉಸ್ಮಾನಗಣಿ ಕೂಡ ಆಕ್ಷೇಪ ಎತ್ತಿ ವಿವಾದಕ್ಕೆ ಕಾರಣರಾಗಿದ್ದರು. ಅವರ ಹೇಳಿಕೆಯನ್ನು ರಮೇಶ ಬದ್ನೂರ ಸಮರ್ಥಿಸಿದ್ದಾರೆ.

ಉಸ್ಮಾನಗಣಿ ದೇಶದ್ರೋಹದ ಮಾತೇ ಆಡಿಲ್ಲ ಕರವೇ ಜಿಲ್ಲಾಧ್ಯಕ್ಷ ಬದ್ನೂರ..!

ಅಭಯ ಮನಗೂಳಿ

ಬಾಗಲಕೋಟೆ:
ಭಾರತಮಾತೆ, ಗಂಗಾಮಾತೆ, ಗೋಮಾತೆ ಹೀಗೆ ಎಲ್ಲರನ್ನೂ ತಾಯಿ‌ ಎನ್ನುವುದು ಅವೈಜ್ಞಾನಿಕ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಉಸ್ಮಾನಗಣಿ ಹುಮ್ನಾಬಾದ್ ಪರವಾಗಿ ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಬ್ಯಾಟಿಂಗ್ ‌ಮಾಡಿದ್ದಾರೆ.

ಸಿಎಎ ವಿರೋಧಿ ಹೋರಾಟದಲ್ಲೂ ಬದ್ನೂರ ಹಾಗೂ ಉಸ್ಮಾನಗಣಿ ವೇದಿಕೆ ಹಂಚಿಕೊಂಡಿದ್ದರು. ಬ್ಲೇಡ್ ಬಾಬಾ ಎಂದು ಕುಖ್ಯಾತಿ ಹೊಂದಿದ ಅಸ್ಲಂ ಶಹಾಪೂರ  ಸಹ ಅಂದು ಅದೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಈಗ ನೆನಪು.

ಎಂಐಎಂ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಉಸ್ಮಾನಗಣಿ ಹುಮ್ನಾಬಾದ್ ಇಳಕಲ್ ನಲ್ಲಿ ನಡೆದ ವೃತ್ತ ಉದ್ಘಾಟನೆವೊಂದರ ವೇಳೆ ಭಾರತ ಮಾತೆಗೆ ಜೈಕಾರ ಕೂಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿವಾದ ಸೃಷ್ಠಿಸಿ ತಮ್ಮ ಮೇಲೆ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು.

ನಂತರ ಹಿಂದೂಪರ ಸಂಘಟನೆಗಳು ಇಳಕಲನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿ ಉಸ್ಮಾನಗಣಿ ಬಂಧನಕ್ಕೆ ಒತ್ತಾಯಿಸಿದ್ದವು. ಸಂತರು,‌ಮುಖಂಡರು ಪಾಲ್ಗೊಂಡು ಉಸ್ಮಾನಗಣಿ ಬಂಧನಕ್ಕೆ‌ ಒತ್ತಾಯಿಸಿದ್ದರು. 

ಹಿಂದೂಪರ ಸಂಘಟನೆಗಳ ಆಕ್ಷೇಪದ ಹೊರತಾಗಿಯೂ ಉಸ್ಮಾನಗಣಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಭಾರತೀಯರಲ್ಲಿ ಏಕತೆ ಭಾವ ಮೂಡಿಸಿದ, ಭಾರತೀಯರು ಶ್ರದ್ಧೆಯಿಂದ ಹೇಳುವ ಭಾರತಮಾತೆಯ ಜೈಕಾರವನ್ನು ಉಸ್ಮಾನಗಣಿ ಟೀಕಿಸಿರುವುದಕ್ಕೆ  ದೇಶಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಉಸ್ಮಾನಗಣಿ ಹೇಳಿಕೆಯನ್ನು ಸಮರ್ಥಿಸಿರುವ ರಮೇಶ ಬದ್ನೂರ ಭಾರತಮಾತೆ ಜೈಕಾರ, ಗಂಗಾಮಾತೆಗೆ ಜೈಕಾರ, ಗೋಮಾತೆಗೆ ಜೈಕಾರ ಎನ್ನುವುದು ಅವೈಜ್ಞಾನಿಕ ಒಂದು ಮಗುವಿಗೆ ಒಬ್ಬಳೆ ತಾಯಿ ಇದು ಅವೈಜ್ಞಾನಿಕ ಎಂಬ ಮಾತುಗಳಿಂದ ಆರಂಭಗೊಂಡಿರುವ ಉಸ್ಮಾನಗಣಿಯ ವಿಡಿಯೋ ಶೇರ್ ಮಾಡಿ ಒಂದೇ ಒಂದು ಪದ ನನಗೆ ಇದರಲ್ಲಿ ದೇಶದ್ರೋಹ ಅನಿಸಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಫೇಸ್ಬುಕನಲ್ಲಿ ಯುವಕನೋರ್ವ ಅಸಮಾಧಾನ ಹೊರಹಾಕಿದ್ದು, ಬದ್ನೂರ ಅವರ ನಿಲವು ದುರದೃಷ್ಟಕರ ಎಂದಿದ್ದಾರೆ. ದೇಶಭಕ್ತಿ, ಗಂಗಾಮಾತೆ ವಿಚಾರಗಳಲ್ಲಿ ಉಸ್ಮಾನಗಣಿಯ ಹೇಳಿಕೆಯನ್ನು ಬದ್ನೂರ ಹಾಗೂ ಕರವೇ ಖಂಡಿಸುತ್ತದೆ ಎಂದು ಭಾವಿಸಲಾಗಿತ್ತು ಆದರೆ ಉಸ್ಮಾನಗಣಿ ಅವರ ಆಕ್ಷೇಪಾರ್ಹ ಮಾತುಗಳನ್ನು ಅನುಮೋದಿಸಿ ಬದ್ನೂರ ಬರೆದುಕೊಂಡಿರುವುದು ಆಶ್ಚರ್ಯಮೂಡಿಸಿದೆ.