ಯತ್ನಾಳ ಮತ್ತೊಮ್ಮೆ ಗೆದ್ದರೆ ಕತ್ತು ಕೊಯ್ದುಕೊಳ್ಳುವೆ: ಕುತ್ಬುದ್ಧಿನ್ ಖಾಜಿ
ಬಾಗಲಕೋಟೆ:
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಶಾಸಕ ಯತ್ನಾಳ ವಿಧಾನಸೌಧದ ಮೂರನೇ ಮಹಡಿಗೆ ಏರುವುದಿರಲಿ ಮೂರು ಮೆಟ್ಟಿಲು ಹತ್ತಿದ್ದರೂ ನಾನು ಶಿರಚ್ಛೇದನ ಮಾಡಿಕೊಳ್ಳುವೆ ಎಂದು ಮುಸ್ಲಿಂ ಸಮುದಾಯದ ಮುಖಂಡ ಕುತುಬುದ್ಧಿನ್ ಖಾಜಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಯತ್ನಾಳ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ತೇಜೋವಧೆ ಖಂಡಿಸಿ ನವನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಯತ್ನಾಳ ಅವರು ಮುಂದಿನ ಚುನಾವಣೆಯಲ್ಲಿ ಗೆದ್ದರೆ ವಿಜಯಪುರದ ಗಾಂಧಿ ಚೌಕಿನಲ್ಲಿ ಕತ್ತು ಕೊಯ್ದುಕೊಳ್ಳುವೆ ಎಂದು ಆಕ್ರೋಶಭರಿತವಾಗಿ ಮಾತನಾಡಿದರು.
ಶಾಸಕ ಬಸನಗೌಡ ಪಾಟೀಲ ಒಮ್ಮೆ ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಮ್ಮೆ ಪಂಚಮಸಾಲಿ ಎಂದು ಹೇಳಿಕೊಳ್ಳುತ್ತಾರೆ. ಅವರು ನಿಜವಾಗಿ ಯಾರೆಂಬುದನ್ನು ಮೊದಲು ಬಹಿರಂಗ ಯಾರಿಗೆ ಹುಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದು ಹರಿಹಾಯ್ದರು. ಬೈಗುಳದ ಫ್ಯಾಕ್ಟರಿ ನಮ್ಮ ಬಳಿಯಿದ್ದು, ಕೆಟ್ಟ ಶಬ್ದಗಳ ಪುಸ್ತಕವನ್ನೇ ಬರಿಯಬಲ್ಲೆ ಅದನ್ನು ಪ್ರಯೋಗಿಸುವುದು ಬೇಡ ಎಂದು ಬಿಟ್ಟಿದ್ದೀನೆ. ಯತ್ನಾಳೊಬ್ಬ ಅಯೋಗ್ಯ ಶಾಸಕ ಎಂದು ಟೀಕಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹುಲಿಯಲ್ಲ, ಇಲಿ. ಲಿಂಗಾಯತರಲ್ಲಿ ಬಸವಣ್ಣನನ್ನು ಪಾಲಿಸುವರು ಬೇರೆ ಇದ್ದಾರೆ, ಆರ್‌ಎಸ್‌ಎಸ್ ಪಾಲಿಸೋರು ಬೇರೆ ಇದ್ದಾರೆ. ಯತ್ನಾಳ ಜಾತಿ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದು, ವಿಜಯಪುರದಲ್ಲಿ ೫೦ ಸಾವಿರ ಜನರನ್ನು ಸೇರಿ ಸಮಾವೇಶ ಮಾಡಿ ತೋರಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುತ್ತೇನೆ ಎಂದು ಗುಡುಗಿದರು.
ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದೆ ರಮೇಶ ಜಾರಕಿಹೊಳಿ. ಇಂದು ಅವರ ವಿರುದ್ಧ ಬೇಕಾಬಿಟ್ಟಿಯಾಗಿ ಬಿಜೆಪಿ ಅವರು ಮಾತನಾಡುತ್ತಿದ್ದಾರೆ. ಸಿಂಧೂ ನದಿದಡದಲ್ಲಿ ವಾಸಿಸೋರನ್ನು ಹಿಂದೂ ಎಂದು ಕರೆಯಲಾಯಿತು. ಅವರು ಉತ್ತರ ಭಾರತದಲ್ಲಿ ಹೆಚ್ಚಾಗಿದ್ದಾರೆ. ನಾವೆಲ್ಲ ದ್ರಾವಿಡರು, ಪೆರಿಯಾರ್ ಚಿಂತಕರು ಎಂದು ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಅವರನ್ನು ಕೈ ಬಿಡದಿದ್ದರೆ ೨ಎ ಮೀಸಲಾತಿ ದೊರೆಯುವುದಿಲ್ಲ ಎಂದು ಪಂಚಮಸಾಲಿ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ ಅರ್ಥ ಮಾಡಿಕೊಳ್ಳಬೇಕು. ನಾನು ಬಸವಣ್ಣನವರನ್ನು ಹಿಂಬಾಲಿಸುವ ಲಿಂಗಾಯತ ಪಂಚಮಸಾಲಿ ಆರ್‌ಎಸ್‌ಎಸ್ ಹಿಂದೆ ಹೋಗುವುದಿಲ್ಲ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್, ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ಗಳು ಸಹ ಹಿಂದೂ ಎನ್ನುವುದು ಧರ್ಮ ಅಲ್ಲ ಎಂದಿದ್ದಾರೆ ಅವರ ವಿರುದ್ಧ ಯಾವಾಗ ಯತ್ನಾಳ ಹೋರಾಡುವುದು. ಅವರು ಜೆಡಿಎಸ್‌ನಲ್ಲಿದ್ದಾಗ ಟೋಪಿ ಧರಿಸಿದ್ದರು ಎಂದು ಟೀಕಿಸಿದರು.
ವಾಲ್ಮೀಕಿ ನಾಯಕ ಮಹಾಸಭೆ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ಜಯರಾಜ ಹಾದಿಕರ, ನಗರಸಭೆ ಸದಸ್ಯ ಹಾಜಿಸಾಬ ದಂಡಿನ, ಸುಭಾಷ್ ಗಸ್ತಿ, ಭರಮಣ್ಣ ಟೋಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ನ್ಯಾಮಗೌಡ, ಎ.ಎ.ದಂಡಿಯಾ ಮತ್ತಿತರರು ನೇತೃತ್ವ ವಹಿಸಿದ್ದರು.