ಜಮಖಂಡಿಯಿಂದ ನಾನೂ ಆಕಾಂಕ್ಷಿ: ಮೋಹನ ಜಾಧವ
ಬಾಗಲಕೋಟೆ:
ಕಳೆದ ನಾಲ್ಕು ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವ ನಾನು ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿದ್ದೇನೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮೋಹನ ಜಾಧವ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೮೦ ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಾರ್ವಜನಿಕ ಜೀವನವನ್ನು ಆರಂಭಿಸಿ ನಂತರ ಬೀಳಗಿ ತಾಲೂಕು ಘಟಕಕ್ಕೆ ಎರಡು ಬಾರಿ ಅಧ್ಯಕ್ಷನಾಗಿದ್ದೆ, ಪಕ್ಷದಿಂದ ಈ ಬಾರಿ ಟಿಕೆಟ್ ನೀಡುವಂತೆ ಹಿರಿಯ ನಾಯಕರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಶ್ರೀಕಾಂತ ಕುಲಕರ್ಣಿ ಅವರ ಎಲ್ಲ ಚುನಾವಣೆಗಳಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದೇನೆ. ಕಳೆದ ಬಾರಿ ನಾನು ಆಕಾಂಕ್ಷಿಯಾಗಿದ್ದಾಗ ಶ್ರೀಕಾಂತ ಕುಲಕರ್ಣಿ ಅವರು ಮತ್ತೊಮ್ಮೆ ಅವಕಾಶ ಮಾಡಿಕೊಡುವಂತೆ ಕೇಳಿದ್ದರು ಆಗ ನಾನು ಹಿಂದೆ ಸರಿದಿದ್ದೆ, ಈ ಬಾರಿ ಅವರೂ ನನ್ನ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದರು.
ಪಕ್ಷದ ಟಿಕೆಟ್ ಕೋರಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರನ್ನು ಭೇಟಿ ಮಾಡಿದ್ದೇನೆ, ಸಂಘದ ಹಿರಿಯರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪರಿವಾರದ ಹಿನ್ನೆಲೆ ಇರುವ ನನಗೆ ಟಿಕೆಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀಕಾಂತ ಕುಲಕರ್ಣಿ ಅವರು ಎಲ್ಲ ಚುನಾವಣೆಯಲ್ಲಿ ಕೊನೆಯ ಚುನಾವಣೆ ಎನ್ನುತ್ತಾರೆ ಈ ಬಾರಿಯೂ ಅವರು ಆಕಾಂಕ್ಷಿಯಾಗಿದ್ದಾರೆ. ಆದರೆ ಪ್ರಬಲ ಪೈಪೋಟಿಯಲ್ಲಿ ಅವರಿಲ್ಲ ಎಂದರು.