ಬಾಗಲಕೋಟೆ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನಗರಕ್ಕೆ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ಮೀಸಲಿಡಬೇಕೆಂದು ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಮನವಿ ಮಾಡಿದೆ.
ಶುಕ್ರವಾರ ಸಚಿವರನ್ನು ಭೇಟಿ ಮಾಡಿದ ರಮೇಶ ಬದ್ನೂರ ನೇತೃತ್ವದ ನಿಯೋಗವು ೨೦೧೪-೧೫ನೇ ಸಾಲಿನಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ನಗರಕ್ಕೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಘೋಷಿಸಿದ್ದರು. ಆದರೆ ನಂತರದಲ್ಲಿ ಅದಕ್ಕೆ ಅನುದಾನ ಬರಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ಫೆಬ್ರುವರಿ ತಿಂಗಳಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂದು ಮನವಿ ಮಾಡಿದರು.
ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸರ್ಕಾರದಿಂದ ನೇರವಾಗಿ ಇಲ್ಲವೇ ನವನಗರದಲ್ಲಿರುವ ಅಂದಾಜು ೧೫ ಸಾವಿರ ಮೂಲೆ ನಿವೇಶನಗಳನ್ನು ಹರಾಜು ಹಾಕಿ ಅದರಿಂದ ಬರುವ ಆದಾಯದಲ್ಲಿ ನಿರ್ಮಿಸಬಹುದು ಎಂದು ಸಲಹೆ ಮಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ಬಾಗಲಕೋಟೆ ಜನ ಸಂತ್ರಸ್ತರಾಗಿದ್ದು, ಆರ್ಥಿಕವಾಗಿ ಹಿಂದೆ ಬಿದ್ದಿದ್ದಾರೆ. ಹಲವು ಜಿಲ್ಲೆಗಳಲ್ಲಿ ಘೋಷಣೆಯಾಗಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವು ಈಗಾಗಲೇ ಕಾರ್ಯಾರಂಭ ಮಾಡಿದ್ದು, ಬಾಗಲಕೋಟೆಯಲ್ಲೂ ಈ ಬಾರಿ ವೈದ್ಯಕೀಯ ಮಹಾವಿದ್ಯಾಲಯದ ಕಾಮಗಾರಿ ಆರಂಭಗೊಳ್ಳಲೇಬೇಕೆAದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂದ್ರಶೇಖರ ರಾಠೋಡ, ಪೀರಪ್ಪ ಮ್ಯಾಗೇರಿ, ಹಣಮಂತ ರಾಕುಂಪಿ, ಶಿವಾನಂದ ಉದುಪುಡಿ, ಮಹಾದೇವಪ್ಪ ತಟ್ಟಿಮನಿ, ಮಹೇಶ ದೊಡ್ಡನ್ನವರ, ಬಿ.ಎಸ್.ಭಜನ್ನವರ ಇತರರು ಇದ್ದರು.
( ಜಾಹೀರಾತು)