ಬಾಗಲಕೋಟೆ: ೧೩ ಜನರ ಗಡಿಪಾರಿಗೆ ಶಿಫಾರಸ್ಸು..!

ಬಾಗಲಕೋಟೆ: ೧೩ ಜನರ ಗಡಿಪಾರಿಗೆ ಶಿಫಾರಸ್ಸು..!
ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ೧೩ ಜನ ರೌಡಿಶೀಟರ್‌ಗಳ ಗಡಿಪಾರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಅಮರನಾಥ ರೆಡ್ಡಿ ಮಾಹಿತಿ ನೀಡಿದರು. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ೨೬ ಜನರನ್ನು ಗಡಿಪಾರು ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು ೧೭೦೦ ಜನರ ಮೇಲೆ ೧೦೭,೧೧೦ ಪ್ರಕರಣಗಳು ದಾಖಲಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡುವವರ ಮೇಲೆಯೂ ತೀವ್ರ ನಿಗಾ ಇರಿಸಲಾಗಿದ್ದು, ಅಂಥ ಪ್ರಕರಣ ದಾಖಲಾದಲ್ಲಿ ಆರೋಪಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು. ಚುನಾವಣಾ ಆಯೋಗವೂ ಸುಳ್ಳುಸುದ್ದಿ ಹರಡುವವರ ಮೇಲೆ ತೀವ್ರವಾಗಿ ನಿಗಾ ಇರಿಸಲು ಸೂಚಿಸಿದೆ. ನಮ್ಮಲ್ಲಿ ಅದಕ್ಕೆ ಬೇಕಾದ ಪ್ರತ್ಯೇಕ ವಿಭಾಗವೂ ಇದ್ದು, ತೀವ್ರವಾಗಿ ಪರಿಶೀಲನೆ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು. 
ಇನ್ನು ಚುನಾವಣೆಗೆ ಜಿಲ್ಲೆಯಲ್ಲಿ ೨೭೦೦ ಪೊಲೀಸ್ ಸಿಬ್ಬಂದಿ ಅಗತ್ಯವಿದ್ದು, ೮ ಪ್ಯಾರಾಮಿಲ್ಟರಿ ತಂಡಗಳಿಗೆ ಮನವಿ ಮಾಡಲಾಗಿದೆ. ೭ ಕೆಎಸ್‌ಆರ್‌ಪಿ, ಡಿಆರ್ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.