ಸಮಾಜಮುಖಿ ಚಿಂತನೆ, ಅಭಿವೃದ್ಧಿ ಪರ ಬರಹದ ಸಾಧಕ ರಾಮ ಮನಗೂಳಿ: ಶ್ರೀಪ್ರಭುಸ್ವಾಮೀಜಿ
ಬಾಗಲಕೋಟೆ: ಒಬ್ಬ ವ್ಯಕ್ತಿ ತನ್ನ ಸಮಾಜಮುಖಿ ಚಿಂತನೆ, ಅಭಿವೃದ್ಧಿ ಪರವಾದ ಬರಹದ ಮೂಲಕ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಹಿರಿಯ ಪತ್ರಕರ್ತ ರಾಮ ಮನಗೂಳಿ ಅವರು ಉದಾಹರಣೆಯಾಗಿದ್ದಾರೆ ಎಂದು ಬಾಗಲಕೋಟೆ ಚರಂತಿಮಠದ ಶ್ರೀಪ್ರಭು ಸ್ವಾಮೀಜಿ (ನಿಡಸೋಸಿ ಶ್ರೀಪಂಚಮಶಿವಲಿAಗೇಶ್ವರ ಸ್ವಾಮೀಜಿ) ಅಭಿಪ್ರಾಯಪಟ್ಟರು.
ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಹಾಗೂ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ರವಿವಾರ ಮಿನಿ ಅಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಸಂಯುಕ್ತ ಕರ್ನಾಟಕ ಬಾಗಲಕೋಟೆ ಆವೃತ್ತಿ ಮುಖ್ಯಸ್ಥ ದಿ. ರಾಮ ಮನಗೂಳಿ ಅವರಿಗೆ ನುಡಿ-ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿದ್ದ ರಾಮ ಮನಗೂಳಿ ಅವರು, ಚಿಕ್ಕ ವಯಸ್ಸಿನಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪತ್ರಿಕೋದ್ಯಮದ ಹಿರಿಮೆಯನ್ನು ಎತ್ತಿರಿಸಿದ್ದ ಅವರು, ತಮ್ಮ ಬರಹದಲ್ಲಿ ಕರಾರುವಕ್ಕಾದ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದರು. ಅವರ ನಿಧನವು ಪತ್ರಿಕೋದ್ಯಮ, ಸಾಮಾಜಿಕ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಹೇಳಿದರು.
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಮಾತು ಮತ್ತು ಬರಹದಲ್ಲಿ ಸ್ಪಷ್ಟತೆ ಹೊಂದಿದ್ದ ರಾಮ ಮನಗೂಳಿ ಅವರು, ಬರವಣಿಗೆಯಲ್ಲಿ ನೇರ, ನಿಷ್ಠುರತೆ ತೋರಿಸುತ್ತಿದ್ದರು. ಅವರ ಮಾತಿಗೆ ಅರ್ಥವಿರುತ್ತಿತ್ತು, ಪತ್ರಿಕಾರಂಗ, ಸಾಮಾಜಿಕ ಸೇವೆಗೆ ಅಪಾರ ಹಾನಿಯಾಗಿದೆ. ನಾನು ಸುಲಭವಾಗಿ ಯಾರ ಮಾತನ್ನು ಕೇಳುತ್ತಿರಲಿಲ್ಲ ಆದರೆ ರಾಮ ಮನಗೂಳಿ ಮಾತು ಕೇಳುತ್ತಿದ್ದೆ ಆತ ಏನೇ ವಿಚಾರ ಹೇಳಿದರೂ ಅದರಲ್ಲಿ ಅರ್ಥ ಇರುತಿತ್ತು. ಪ್ರತಿದಿನ ಬೆಳಗ್ಗೆ ಆತನೊಂದಿಗೆ ಮಾತನಾಡದೆ ದಿನಾ ಆರಂಭಗೊಳ್ಳುತ್ತಿರಲಿಲ್ಲ ಎಂದು ಸ್ಮರಿಸುತ್ತ ಭಾವುಕರಾದರು.
ನೃಪತುಂಗ ವಿವಿ ಕುಲಪತಿ ಡಾ.ಶ್ರೀನಿವಾಸ ಬಳ್ಳಿ ಮಾತನಾಡಿ, ಎಬಿವಿಪಿಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ರಾಮ ಮನಗೂಳಿ ಅವರು, ಅನ್ಯಾಯವನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದರು. ಈ ಭಾಗದಲ್ಲಿ ಎಬಿವಿಪಿ ಗಟ್ಟಿಯಾಗಿ ಬೇರೂರಲು ಮನಗೂಳಿ ಅವರ ಕೊಡುಗೆ ಅಪಾರವಾಗಿದೆ ಎಂದರು.
ಪತ್ರಕರ್ತ ಈಶ್ವರ ಶೆಟ್ಟರ ಮಾತನಾಡಿ, ರಾಮ ಮನಗೂಳಿ ನನ್ನ ಹಿರಿಯ ಸಹೋದರರಂತ್ತಿದ್ದರು. ನಾವು ವೃತ್ತಿಗೆ ಕಾಲಿಟ್ಟಾಗ ಯುಕೆಪಿ ಆಳ-ಅಗಲ ಪರಿಚಯಿಸಿ ಸರಿಸಮಾನವಾಗಿ ನಮ್ಮನ್ನು ಕರೆದುಕೊಂಡು ಹೋದರು. ಯುಕೆ ಅನುಷ್ಠಾನ ಆರಂಭಗೊAಡಾಗ ದೊಡ್ಡ ಜಯ ಸಿಕ್ಕಷ್ಟು ಖುಷಿಪಟ್ಟು ಆನಂದ ಭಾಷ್ಪ ಸುರಿಸಿದ್ದರು. ಬಾಗಲಕೋಟೆಯಲ್ಲಿದ್ದುಕೊಂಡು ಎಲ್ಲಡೆಯ ಸಂಪರ್ಕ ಸಾಧಿಸಿದ್ದರು ಅವರ ಕೊಡುಗೆಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ರಾಮ ಮನಗೂಳಿ ಕುಟುಂಬದವರು ಅವರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಿಸಿ ಅಪೂರ್ಣ ಕೆಲಸಗಳನ್ನು ಮುಂದವರಿಸುವುದಾಗಿ ಘೋಷಿಸಿದರು.
ಧಾರವಾಡದ ಹಿರಿಯ ಎಬಿವಿಪಿ ಕಾರ್ಯಕರ್ತ ರವಿ ಯಲಿಗಾರ, ರಾಜು ಗಚ್ಚಿನಮಠ, ಶ್ರೀನಿವಾಸ ಮನಗೂಳಿ, ಆರೆಸ್ಸೆಸ್ ನಿಕಟಪೂರ್ವ ಜಿಲ್ಲಾಸಂಘಚಾಲಕ ಡಾ.ಸಿ.ಎಸ್.ಪಾಟೀಲ, ಬವಿವ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ್, ಮುಖಂಡ ಜಯಂತ ಕುರುಂದವಾಡ, ಪತ್ರಕರ್ತರಾದ ಉಮೇಶ ಪೂಜಾರಿ, ರವಿರಾಜ ಗಲಗಲಿ, ಅಶೋಕ ಶೆಟ್ಟರ, ಸಂತೋಷ ದೇಶಪಾಂಡೆ, ಜಗದೀಶ ಗಾಣಿಗೇರ, ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಹಾಸ್ಟೇಲ್ ಮಂಡಳಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಹಿಂಜಾವೇ ಮುಖಂಡ ಕುಮಾರ ಹಿರೇಮಠ ಸೇರಿದಂತೆ ಅನೇಕರು ಇದ್ದರು.