ಮಕ್ಕಳಿಗೆ ವಿಷ ಉಣಿಸಿ ತಾಯಿಯೂ ಸಾವು: ತಿಮ್ಮಾಪುರದಲ್ಲಿ ಮನಕಲಕುವ ಘಟನೆ..!

ಬಾಗಲಕೋಟೆ:
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯೊಬ್ಬಳು ತಾನೂ ವಿಷಸೇವಿಸಿದಲ್ಲದೇ ತನ್ನ ಮೂವರು ಮಕ್ಕಳಿಗೂ ವಿಷ ಉಣಿಸಿ ಸಾವನ್ನಪ್ಪಿರುವ ಘಟನೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಉ
ಯಲ್ಲವ್ವ ಉರ್ಫ್ ರೇಖಾ ಅರ್ಜುನ್ ಬಗಲಿ(೨೬) ,ಸನ್ನಿಧಿ(೮), ಸಮೃದ್ಧಿ(೫), ಶ್ರೀನಿಧಿ(೨.೫) ಮೃತ ದುರ್ದೈವಿಗಳು. ಮಧ್ಯಾಹ್ನ ೪ರ ವೇಳೆಗೆ ತಿಮ್ಮಾಪುರದ ತನ್ನ ತವರು ಮನೆಯಲ್ಲಿ ಪಾನೀಯಾ ಬಾಟಲಿನಲ್ಲಿ ವಿಷ ಮಿಶ್ರಣ ಮಾಡಿ ತಾನೂ ಕುಡಿದಿದ್ದಲ್ಲದೇ ಮಕ್ಕಳಿಗೂ ವಿಷ ಉಣಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟರೆ ಕೊನೆಯ ಮಗು ಶ್ರೀನಿಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಹೇಳಲಾಗಿದೆ.
ಪತಿ ಅರ್ಜುನ ಮದ್ಯವ್ಯಸನಿ ಎಂದು ಹೇಳಲಾಗಿದ್ದು, ಮೂವರು ಹೆಣ್ಣಮಕ್ಕಳು ಹುಟ್ಟಿದ್ದರಿಂದ ಅವರ ಶಿಕ್ಷಣ, ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ರೇಖಾ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಈ ಬಗ್ಗೆ ಸದಾ ಯೋಚಿಸುತ್ತಿದ್ದ ಆಕೆ ತಾನು ಸಾಯುವುದರ ಜತೆಗೆ ಮಕ್ಕಳಿಗೂ ಜ್ಯೂಸಿನಲ್ಲಿ ವಿಷ ಬೆರೆಸಿ ಕುಡಿದಿದ್ದಾಳೆ. ನಂತರ ಶವಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ.
ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಎಸ್‌ಪಿ ಜಯಪ್ರಕಾಶ ಅವರು, ಬುಧವಾರ ಮಧ್ಯಾಹ್ನ ತನ್ನ ಮೂವರು ಮಕ್ಕಳಿಗೆ ಪಾನೀಯಾವೊಂದರಲ್ಲಿ ವಿಷ ಬೆರೆಸಿ ಕುಡಿಸಿ ತಾನೂ ಕುಡಿದಿರುವ ರೇಖಾ ಬಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಧ್ಯಾಹ್ನವಷ್ಟೇ ಘಟನೆ ನಡೆದಿರುವುದರಿಂದ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತಿ ಅರ್ಜುನ ವಿಚಾರಣೆ ಮಾಡಲಾಗುತ್ತಿದ್ದು, ಇನ್ನೂ ದೂರು ಸಹ ದಾಖಲಾಗಿಲ್ಲ. ಮರಣೋತ್ತರ ವರದಿ ಹಾಗೂ ತನಿಖೆಯಿಂದಲೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದರು.
ಮೇಲ್ನೋಟಕ್ಕೆ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರು, ಹತ್ತಿರದ ಸಂಬAಧಿಗಳು ಹೇಳುವ ಪ್ರಕಾರ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಪತಿ ಮದ್ಯವ್ಯಸನಿ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ತನಿಖೆ ನಂತರ ಸಂಪೂರ್ಣ ಮಾಹಿತಿ ತಿಳಿದು ಬರಲಿದೆ ಎಂದು ಹೇಳಿದರು.
ಪತಿ ಅರ್ಜುನ ಬೀಳಗಿ ತಾಲೂಕು ಸುನಗದವನಾಗಿದ್ದು, ರೇಖಾ ತಿಮ್ಮಾಪುರದವಳಾಗಿದ್ದಾಳೆ. ತಿಮ್ಮಾಪುರದ ಆಕೆಯ ಮನೆಯಲ್ಲೇ ಅರ್ಜುನ ವಾಸಿಸುತ್ತಿದ್ದು, ಕಬ್ಬು ಕಟಾವು ಕೆಲಸ ಮಾಡುತ್ತಿದ್ದ. ಅರ್ಜುನನ ಎರಡನೇ ಪುತ್ರಿ ಸಮೃದ್ಧಿ ನಮ್ಮೊಂದಿಗೆ ಇದ್ದಳು. ಆಕೆ ೭ ತಿಂಗಳು ಇರುವಾಗಿನಿಂದಲೂ ನಮ್ಮ ತಾಯಿಯ ಜತೆಗಿದ್ದಳು, ಮಂಗಳವಾರವಷ್ಟೇ ಸಮೃದ್ಧಿಯನ್ನು ನಮ್ಮ ತಾಯಿ ತಿಮ್ಮಾಪುರಕ್ಕೆ ಬಿಟ್ಟುಬಂದಿದ್ದರು. ಆಗಲೂ ಈ ರೀತಿಯ ಘಟನೆ ನಡೆಯುವ ಯಾವ ಮುನ್ಸೂಚನೆಯೂ ಸಿಕ್ಕಿರಲಿಲ್ಲ. ಆಕೆಯ ಸಾವಿಗೆ ಕಾರಣವೇನು ಎಂಬುದು ತಮಗೂ ತಿಳಿದಿಲ್ಲ ಎಂದು ಅರ್ಜುನನ ಸಹೋದರಿ ರೇಣುಕಾ ಬಗಲಿ ತಿಳಿಸಿದರು.
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಭೀಮಣ್ಣ ಸೂರೆ, ಪಿಎಸ್‌ಐ ಜನಾರ್ಧನ ಭಟ್ರಳ್ಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪತಿ ಅರ್ಜುನನ್ನು ವಿಚಾರಣೆಗೆ ಒಳಪಡಿಸಿರುವ ಮಾಹಿತಿ ಲಭ್ಯವಾಗಿದೆ. ಮೃತ ರೇಖಾ ಮಾಜಿ ಸಚಿವ ಎಚ್.ವೈ.ಮೇಟಿ ಅವರು ದೂರದ ಸಂಬಂಧಿ ಎಂದು ತಿಳಿದು ಬಂದಿದೆ.