ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ : ಡಾ.ದೇವರಾಜ ಪಾಟೀಲ
ಬಾಗಲಕೋಟ : ಕಳೆದ ೨೦೦೮ರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನಾಗಿ, ಪ್ರತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ, ಈ ಬಾರಿಯೂ ನನಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಿದ್ದು, ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಸಿದ್ಧರಾಗೋಣ ಎಂದು ಕಾಂಗ್ರೆಸ್ ಮುಖಂಡ ಡಾ.ದೇವರಾಜ ಪಾಟೀಲ ಹೇಳಿದರು.
ನಗರದ ಅವರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ೨೦೦೮ರ ಚುನಾವಣೆಯಲ್ಲಿ ಬಾಗಲಕೋಟ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಎಚ್.ವೈ. ಮೇಟಿ ಅವರ ಪರವಾಗಿ ತನು-ಮನ-ಧನದಿಂದ ಕೆಲಸ ಮಾಡಿದ್ದೆ. ಈ ಕ್ಷೇತ್ರದಲ್ಲಿ ಅವರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಬಾದಾಮಿ ಕ್ಷೇತ್ರದಲ್ಲಿ ಸಂಘಟನೆ ಮಾಡಿದೆ. ಪಕ್ಷದ ಹಿರಿಯರು ನನ್ನ ಸಂಘಟನಾ ಶಕ್ತಿ ಪರಿಗಣಿಸಿ, ೨೦೧೩ರಲ್ಲೇ ಟಿಕೆಟ್ ಘೋಷಣೆ ಮಾಡಿದ್ದರು. ಆಗ ಹಿರಿಯರ ಸೂಚನೆ ಪಾಲಿಸಿ, ಬೇರೆಯವರಿಗೆ ಟಿಕೆಟ್ ತ್ಯಾಗ ಮಾಡಿದೆ ಎಂದರು.
ಟಿಕೆಟ್ ಕೊಟ್ಟು, ಬಳಿಕ ಕಸಿದುಕೊಂಡರೂ ಯಾವುದೇ ಅಸಮಾಧಾನ ತೋರದೇ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದೆ. ಮುಂದೆ ೨೦೧೮ರಲ್ಲಿ ಮತ್ತೆ ಟಿಕೆಟ್ ಕೊಟ್ಟು ಕಸಿದುಕೊಂಡರು. ೨೦೧೪ರ ಲೋಕಸಭೆ ಚುನಾವಣೆಯಲ್ಲೂ ದೆಹಲಿ ಮಟ್ಟದಲ್ಲಿ ನನ್ನ ಹೆಸರು ಹೋಗಿತ್ತು. ಪದೇ ಪದೇ ಟಿಕೆಟ್ ಕೊಟ್ಟು ಕಸಿದುಕೊಂಡರೂ ಯಾವುದೇ ಚಕಾರವೆತ್ತಲಿಲ್ಲ. ನಮ್ಮಂತಹ ವಿದ್ಯಾವಂತರಿಗೆ ಈ ರೀತಿ ಅನ್ಯಾಯ ಮಾಡಿದರೆ ಸುಮ್ಮನೆ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಿಷ್ಠೆಯಿಂದ ದುಡಿದವನಿಗೆ ಅನ್ಯಾಯವಾಗಿದೆ. ಬಾಗಲಕೋಟ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸು ಹೊತ್ತಿರುವೆ. ಈ ಕ್ಷೇತ್ರದ ಪ್ರತಿಯೊಬ್ಬ ಪ್ರಜ್ಞಾವಂತರು, ಮನಸ್ಸು ಮಾಡಿದರೆ ಖಂಡಿತ ಬದಲಾವಣೆ ಸಾಧ್ಯಗಿದೆ. ಜನರು ನನ್ನೊಂದಿಗೆ ಕೈಜೋಡಿಸಿ, ಸ್ವಾಭಿಮಾನಿಗಳು, ಪ್ರಾಜ್ಞಾವಂತರು ಮನಸ್ಸು ಮಾಡಿದರೆ ಕ್ಷೇತ್ರದಲ್ಲಿ ಏನೆಲ್ಲ ಮಾಡಹುದು ಎಂಬುದನ್ನು ತೋರಿಸೋಣ ಎಂದು ಹೇಳಿದರು.
ವಿವಿಧ ದೇವಸ್ಥಾನಗಳಿಗೆ ಭೇಟಿ :ನಗರದ ಗ್ರಾಮ ದೇವತೆ, ಕೊತ್ತಲೇಶ್ವರ, ಅಂಬಾಭವಾನಿ ದೇವಸ್ಥಾನ,ಗಣೇಶ ದೇವಸ್ಥಾನ, ಪಂಖಾ ಮಸೀದಿ, ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ತೆರಳುವ ವೇಳೆ ರಸ್ತೆಯ ಪಕ್ಕದ ವಿವಿಧ ಅಂಗಡಿಕಾರರು, ವ್ಯಾಪಾರಸ್ಥರನ್ನು, ಕೂಲಿಕಾರ್ಮಿಕರನ್ನು ಭೇಟಿ ಮಾಡಿದ ಡಾ.ದೇವರಾಜ ಪಾಟೀಲ, ಈ ಬಾರಿ ಚುನಾವಣೆಯಲಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ನಂತರ ಗೃಹ ಕಚೇರಿಗೆ ಆಗಮಿಸಿದ್ದ ಕಿರಸೂರ, ಅಚನೂರ, ನೀರಲಕೇರಿ, ಮುಚಖಂಡಿ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.