ಜಿಲ್ಲಾಸ್ಪತ್ರೆಯಲ್ಲಿ ಸ್ವ್ಯಾಬ್ ಟೆಸ್ಟ್ ಅವ್ಯವಸ್ಥೆ: ಸಾರ್ವಜನಿಕರಿಂದ ತರಾಟೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಕೋವಿಡ್ ಟೆಸ್ಟ್ ಮಾಡುವ ಸಿಬ್ಬಂದಿ ಪಾನಮತ್ತರಾಗಿರುವ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಜನ ಜಿಲ್ಲಾ ಸರ್ಜನ್ ಗೆ ಲಿಖಿತ ದೂರು ನೀಡಿದ್ದಾರೆ.
ಪಾನಮತ್ತನಾಗಿರುವ ಜಿಲ್ಲಾಸ್ಪತ್ರೆ ಸಿಬ್ಬಂದಿಯೋರ್ವ ಗಂಟಲು ದ್ರವ ಪಡೆಯುವ ಸಂದರ್ಭದಲ್ಲಿ ಕಡ್ಡಿಯನ್ನು ಬಾಯಿಯಲ್ಲಿ ತಾಗದಂತೆ ಗಂಟಲಕ್ಕೆ ಹಾಕುವ ಬದಲು, ಕಡ್ಡಿ ಹಾಕಿದ ನಂತರ ಬಾಯಿ ಮುಚ್ಚಿದರೂ ಕಡ್ಡಿಯನ್ನು ಒತ್ತಾಯಪೂರ್ವಕವಾಗಿ ತುರುಕಿ ದ್ರವ ಪಡೆದಿದ್ದಾನೆ.
ಅಲ್ಲದೆ ಆತನ ನಡವಳಿಕೆ ನೋಡಿ ಪಾನಮತ್ತನಾಗಿರುವ ಬಗ್ಗೆಯೂ ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದು ಊಟಕ್ಕೆಂದು ತೆರಳಿದವನು ಸಹ ತಡವಾಗಿ ಬಂದಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಸಾರ್ವಜನಿಕರು ಜಿಲ್ಲಾ ಸರ್ಜನ್ ಪ್ರಕಾಶ ಬಿರಾದಾರ ಅವರಿಗೆ ಲಿಖಿತ ದೂರನ್ನೂ ನೀಡಿದ್ದು, ಇದೆಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನೊಟೀಸ್ ಜಾರಿ:
ಸ್ವ್ಯಾಬ್ ಟೆಸ್ಟಿಂಗ್ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ಸಾರಪ್ಪ ಮಾದರಗೆ ನೋಟಿಸ್ ಜಾರಿ ಮಾಡಿರುವುದಾಗಿ ಜಿಲ್ಲಾ ಸರ್ಜನ್ ಪ್ರಕಾಶ ಬಿರಾದಾರ ತಿಳಿಸಿದ್ದಾರೆ. ನಿರಂತರ ಆರೋಪ ಕೇಳಿ ಬಂದಿರುವುದರ ಜತಗೆ ಲಿಖಿತ ದೂರು ಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.