ನಿಯಂತ್ರಣ ಕೊಠಡಿಯಲ್ಲಿ ದಿನದ ೨೪ ಗಂಟೆ ನಿಗಾ

ನಿಯಂತ್ರಣ ಕೊಠಡಿಯಲ್ಲಿ ದಿನದ ೨೪ ಗಂಟೆ ನಿಗಾ

ಬಾಗಲಕೋಟೆ:  ಜಿಲ್ಲಾಡಳಿತ ಭವನದಲ್ಲಿರುವ ಜಿ.ಪಂ ಸಭಾಭವನದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಚುನಾವಣಾ ಪ್ರಕ್ರಿಯೆ ಮೇಲೆ ದಿನ ೨೪ ಗಂಟೆಗಳ ಕಾಲ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.
 ಚೆಕ್‌ಪೋಸ್ಟಗಳ ಮೇಲೆ ಕಣ್ಗಾವಲು, ಸಿ-ವಿಜಿಲ್ ಆ್ಯಪ್ ಮೂಲಕ ಮತ್ತು ಸಹಾಯವಾಣಿ ಸಂಖ್ಯೆ ೧೯೫೦ಗೆ ಕರೆಗಳ ಮೂಲಕ ದೂರು ಸ್ವೀಕಾರ, ವಿದ್ಯುನ್ಮಾನ, ಮುದ್ರಣ ಮಾದ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಪರಿಶೀಲನೆ ಕಾರ್ಯ ದಿನ ೨೪ ಗಂಟೆಗಳ ಕಾಲ ನಡೆಯುತ್ತಿದೆ. ಮೂರು ಸಿಪ್ಟ್ಗಳಲ್ಲಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 
 ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಉಚಿತ ಸಹಾಯವಾಣಿ ಮೂಲಕ ಒಟ್ಟು ೯೧ ದೂರುಗಳು ದಾಖಲಾಗಿರುತ್ತವೆ. ದೂರು ಸ್ವೀಕರಿಸಿದ ತಕ್ಷಣ ಸಂಬAಧಿಸಿದ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗುತ್ತದೆ. ಸಿ-ವಿಜಿಲ್ ಆ್ಯಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆಗೆ ಸಂಬAಧಿಸಿದ ೪೪೭ ದೂರುಗಳು ಬಂದಿದ್ದು, ಅದರಲ್ಲಿ ೩೩೮ ದೂರುಗಳಿಗೆ ಕ್ರಮವಹಿಸಲಾಗಿದೆ. ೪೯ ಮಾತ್ರ ಕ್ರಮಕ್ಕೆ ಬಾಕಿ ಉಳಿದಿರುತ್ತವೆ. 
 ಜಿಲ್ಲೆಯ ಎಲ್ಲ ವಿಧಾನ ಮತಕ್ಷೇತ್ರಗಳು ಸೇರಿ ಒಟ್ಟು ೨೪ ಕಡೆಗಳಲ್ಲಿ ಚೆಕ್‌ಪೋಸ್ಟಗಳನ್ನು ಸ್ಥಾಪಿಸಲಾಗಿದ್ದು, ಮುಧೋಳ, ತೇರದಾಳ, ಜಮಖಂಡಿ, ಬೀಳಗಿ ಮತಕ್ಷೇತ್ರಗಳಲ್ಲಿ ತಲಾ ೩ ಹಾಗೂ ಬಾದಾಮಿ, ಬಾಗಲಕೋಟೆ, ಹುನಗುಂದ ಮತಕ್ಷೇತ್ರಗಳಲ್ಲಿ ತಲಾ ೪ ಚೆಕ್‌ಪೋಸ್ಟಗಳಿವೆ. ಪ್ರತಿ ಚೆಕ್‌ಪೋಸ್ಟಗೆ ೩ ಸಿಸಿಟಿವಿ ಕ್ಯಾಮರಾಗಳಂತೆ ೨೪ ಚೆಕ್‌ಪೋಸ್ಟಗಳಲ್ಲಿ ಅಳವಡಿಸಲಾಗಿದೆ. ಅವುಗಳ ದೃಶ್ಯಾವಳಿಗಳ ಪ್ರಸಾರ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
 ಚೆಕ್‌ಪೋಸ್ಟ ಮೂಲಕ ಹಾದು ಹೋಗುವ ಎಲ್ಲ ವಾಹನಗಳ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಸಿಬ್ಬಂದಿಗಳು ಮಾಡುತ್ತಿರುವ ಕಾರ್ಯದ ಮೇಲೆ ಸಹ ನಿಗಾ ಇಡಲಾಗುತ್ತಿದೆ. ಪ್ಲಾಯಿಂಗ್ ಸ್ಕಾ÷್ವಡ್, ಸ್ಟಾಟಿಕ್ ಸರ್ವೆಲನ್ಸ್ ತಂಡ, ವಿಡಿಯೋ ವೀಕ್ಷಕ ತಂಡದ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಅವರ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಯಂತ್ರಣ ಕೊಠಡಿಯಲ್ಲಿ ನಿಗಾವಹಿಸಲಾಗುತ್ತಿದೆ. 
 ವಿದ್ಯುನ್ಮಾನದ ಮಾದ್ಯಮಗಳಲ್ಲಿ ಪ್ರಸಾರವಾಗುವ ಪ್ರತಿಯೊಂದು ದೃಶ್ಯಗಳನ್ನು ಸಿಬ್ಬಂದಿಗಳು ವೀಕ್ಷಣೆ ಮಾಡುತ್ತಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವಂತಹ ದೃಶ್ಯಗಳನ್ನು ದಾಖಲಿಸಲಾಗುತ್ತದೆ. ಮುಂದಿನ ಕ್ರಮಕ್ಕಾಗಿ ಮಾಹಿತಿ ರವಾನಿಸಲಾಗುತ್ತಿದೆ. ಸಾಮಾಜಿಕ ಜಾಲ ತಾಣಗಳ ಮೇಲೂ ನಿಗಾ ವಹಿಸಲಾಗುತ್ತಿದ್ದು, ಅದಕ್ಕಾಗಿಯೇ ಪ್ರತ್ಯೇಕ ಕೋಶ ತೆರೆಯಲಾಗಿದ್ದು, ಅಲ್ಲಿಯ ಸಿಬ್ಬಂದಿಗಳು ನಿಗಾ ವಹಿಸುತ್ತಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.