ನಗರಸಭೆ : ಆಯ-ವ್ಯಯ ಅಂದಾಜು ಪತ್ರಿಕೆಗೆ ಅನುಮೋದನೆ
ಬಾಗಲಕೋಟೆ: ಬಾಗಲಕೋಟೆ ನಗರಸಭೆಯ ೨೦೨೪-೨೫ನೇ ಸಾಲಿನ ನಿರೀಕ್ಷಿಸಲಾದ ಆದಾಯ ಮತ್ತು ವೆಚ್ಚಗಳಿಗೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಜಾನಕಿ ಕೆ.ಎಂ ಅನುಮೋದನೆ ನೀಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ರಮೇಶ ಜಾಧವ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು ನಗರದ ಜನೆತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಗರಸಭೆಯ ಆದ್ಯ ಕರ್ತವ್ಯ ಆಗಿರುವದರಿಂದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ನಗರದ ನೀರು ಪೂರೈಕೆ, ಸ್ವಚ್ಛತೆ, ಘನತ್ಯಾಜ್ಯ ವಸ್ತುಗಳ ವಿಲೇವಾರಿ, ಬೀದಿ ದೀಪಗಳ ನಿರ್ವಹಣೆ, ನಗರದ ಚರಂಡಿ, ರಸ್ತೆ, ಶೌಚಾಲಯಗಳ ವ್ಯವಸ್ಥೆಯಂತ ಅನೇಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸಲು ಅನುದಾನವನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಶೇ.೨೪.೧೦ (೩೫.೬೨ ಲಕ್ಷ ರೂ.), ನಗರದ ಬಡವರ ಕಲ್ಯಾಣಕ್ಕೆ ಶೇ.೭.೨೫ (೧೦.೭೨ ಲಕ್ಷ ರೂ.), ನಗರದ ಅಂಗವಿಕಲರ ಕಲ್ಯಾಣಕ್ಕೆ ಶೇ.೫ (೭.೩೯ ಲಕ್ಷ ರೂ.) ಹಾಗೂ ಕ್ರೀಡಾ ಚಟುವಟಿಕೆಗಳಿಗಾಗಿ ಶೇ೧ (೧.೪೮ ಲಕ್ಷ ರೂ.) ರಷ್ಟು ಹಣವನ್ನು ಮೀಸಲೀಟ್ಟು ನಿರೀಕ್ಷಿಸಿದ ಆದಾಯ ಮತ್ತು ನಿಗದಿಪಡಿಸಿದ ವೆಚ್ಚಗಳ ಆಯ-ವ್ಯಯವನ್ನು ಸಭೆಯಲ್ಲಿ ಮಂಡಿಸಲಾಗಿದೆ.
ನಿರೀಕ್ಷಿತ ಸ್ವೀಕೃತಿಗಳಗಳಲ್ಲಿ ನಿರೀಕ್ಷಿತ ಕಂದಾಯ ಸ್ವೀಕೃತಿಗಳು ೨೮.೫೬ ಕೋಟಿ ರೂ, ನಿರೀಕ್ಷಿತ ಬಂಡವಾಳ ಸ್ವೀಕೃತಿಗಳು ೧೧.೫೦ ಕೋಟಿ ರೂ, ನಿರೀಕ್ಷಿತ ಅಸಾಮಾನ್ಯ ಸ್ವೀಕೃತಿಗಳು ೮.೮೩ ಕೋಟಿ ರೂ ಸೇರಿ ಒಟ್ಟು ನಿರೀಕ್ಷಿತ ಸ್ವೀಕೃತಿ ೪೮.೯೦ ಕೋಟಿ ರೂ.ಗಳಾಗಿದೆ. ಅದೇ ರೀತಿಯ ನಿರೀಕ್ಷಿತ ವೆಚ್ಚಗಳಲ್ಲಿ ನಿರೀಕ್ಷಿತ ಕಂದಾಯ ವೆಚ್ಚಗಳು ೨೫.೩೮ ಕೋಟಿ ರೂ, ನಿರೀಕ್ಷಿತ ಬಂಡವಾಳ ವೆಚ್ಚಗಳು ೧೪ ಕೋಟಿ, ನಿರೀಕ್ಷಿತ ಅಸಾಮಾನ್ಯ ವೆಚ್ಚಗಳು ೯.೩೩ ಕೋಟಿ ಸೇರಿ ಒಟ್ಟು ನಿರೀಕ್ಷಿತ ವೆಚ್ಚಗಳು ೪೮.೭೨ ಕೋಟಿ ರೂ.ಗಳು ಇದ್ದು, ನಿರೀಕ್ಷಿತ ಸ್ವೀಕೃತಿಯಲ್ಲಿ ನಿರೀಕ್ಷಿತ ವೆಚ್ಚ ಕಳೆದಾಗ ಒಟ್ಟು ೧೭.೬೮ ಲಕ್ಷ ರೂ. ಉಳಿತಾಯ ನಿರೀಕ್ಷಿಸಿ ಅನುಮೋದಿಸಲಾಯಿತು ಎಂದು ಹೇಳಿದ್ದಾರೆ.