ಸಂಸದರ ಕಚೇರಿಗೆ ಎನ್‌ಎಸ್‌ಯುಐ ದಿಢೀರ ಮುತ್ತಿಗೆ..!
ಬಾಗಲಕೋಟೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡುತ್ತಿರುವ ಅನುದಾನದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ ಭವನದಲ್ಲಿರುವ ಸಂಸದ ಪಿ.ಸಿ.ಗದ್ದಿಗೌಡರ ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಕ್ಷದ ರಾಜ್ಯ ಘಟಕದ ಕರೆ ಮೇರೆಗೆ ನನ್ನ ತೆರಿಗೆ ನನ್ನ ಹಕ್ಕು ಎಂದು ಘೋಷಣೆಗಳನ್ನು ಕೂಗುತ್ತ ಜಿಲ್ಲಾಡಳಿತ ಭವನ ಪ್ರವೇಶಿಸಿದ ಕಾರ್ಯಕರ್ತರು ೨೦೧೭-೧೮ರಿಂದ ರಾಜ್ಯಕ್ಕೆ ೧.೮೭ ಲಕ್ಷ ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ದೂರಿದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ ತಿಪ್ಪರೆಡ್ಡಿ ಮಾತನಾಡಿ, ಉತ್ತರ ಭಾರತದ ರಾಜ್ಯಗಳಿಗೆ ಬೆಣ್ಣೆ, ದಕ್ಷಿಣದ ರಾಜ್ಯಗಳಿಗೆ ಸುಣ್ಣ ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತ ಬಂದಿದೆ. ಕರ್ನಾಟಕದಿಂದಲೇ ವಿತ್ತ ಸಚಿವರು ರಾಜ್ಯಸಭೆಗೆ ಆಯ್ಕೆಯಾದರೂ ರಾಜ್ಯದ ಹಕ್ಕುಗಳನ್ನು ಎಂದಿಗೂ ಪ್ರತಿಪಾದಿಸಲಿಲ್ಲ. ಇಂಥ ಅನ್ಯಾಯವನ್ನು ರಾಜಕೀಯವಾಗಿ ನೋಡಬಾರದು ಇದು ಪ್ರತಿ ಕನ್ನಡಿಗನಿಗೆ ಆಗಿರುವ ಅನ್ಯಾಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಮಂಜುನಾಥ ಕನಗೂರಮಠ, ಬಸವರಾಜ ಜಂಬಗಿ, ಸೋಮು ಮೇಟಿ ಇತರರು ಇದ್ದರು.