ಬಹುತೇಕ ಕಡೆ ನಾಳೆ ಗಣೇಶ ವಿಸರ್ಜನೆ

ಬಹುತೇಕ ಕಡೆ ನಾಳೆ ಗಣೇಶ ವಿಸರ್ಜನೆ
ಬಾಗಲಕೋಟೆ: ಗಣೇಶ ಚತುರ್ಥಿಯ ಐದನೆ ದಿನವಾದ ಬುಧವಾರ ಜಿಲ್ಲಾ ಕೇಂದ್ರ ಬಾಗಲಕೋಟೆಯ ಬಹುತೇಕ ಸಾರ್ವಜನಿಕ ಮಂಡಳಿಗಳ ಗಣೇಶ ವಿಸರ್ಜನೆ ಜರುಗಲಿದೆ. ಜಿಲ್ಲೆಯ ೧೭೦೧ ಗಣೇಶ ಮಂಡಳಿಗಳ ವಿಸರ್ಜನೆ ಜರುಗಲಿದೆ. 

ಬಾಗಲಕೋಟೆ ನಗರದಲ್ಲಿ ೪೫, ನವನಗರ, ವಿದ್ಯಾಗಿರಿಯ ೪೭ ಹಾಗೂ ಬಾಗಲಕೋಟೆಯ ಗ್ರಾಮೀಣ ಠಾಣೆಯ ೧೨೦ ಸೇರಿ ಜಿಲ್ಲೆಯ ಒಟ್ಟು ೧೭೦೧ ಗಣೇಶ ಮಂಡಳಿಗಳ ವಿಸರ್ಜನೆ ಜರುಗಲಿದೆ. 
ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದ್ದು, ನಗರದ ಕ್ವಾರಿ ಹಾಗೂ ಮಹಾರುದ್ರಪ್ಪನ ಹಳ್ಳದ ಬಳಿ ಗಣೇಶ ವಿಸರ್ಜನೆಗೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. 

ನಗರದ ಶಹರ ಗಜಾನನ ಉತ್ಸವ ಮಂಡಳಿಯೂ ಸೇರಿದಂತೆ ಪ್ರಮುಖ ಮಂಡಳಿಗಳಲ್ಲಿ ಸತ್ಯನಾರಾಯಣ ಪೂಜೆ, ಗಣಹೋಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದ್ದು, ಕೋಟೆನಗರಿ ಸಂಪೂರ್ಣ ಕಳೆಕಟ್ಟಿದೆ. 
ಇದೇ ವರ್ಷ ಕೊನೆ: 
ಬವಿವ ಸಂಘದ ಮುಂಭಾಗದಲ್ಲಿರುವ ದೊಡ್ಡಸಾಬಣ್ಣನ ಓಣಿಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಇದೇ ವರ್ಷ ಕೊನೆ ಎನ್ನಲಾಗಿದೆ. ಚತುಷ್ಪಥ ಹೆದ್ದಾರಿಗಾಗಿ ಓಣಿಯ ಬಹುಭಾಗ ನೆಲಸಮಗೊಳ್ಳುವ ಭೀತಿಯಿದ್ದು, ಈ ಹಿನ್ನೆಲೆಯಲ್ಲಿ ಇದೇ ಅಂತಿಮ ವರ್ಷ ಎಂದು ಭಾವಿಸಿ ಅದ್ಧೂರಿ ಉತ್ಸವ ನೆರವೇರಿಸಲಾಗುತ್ತಿದೆ. ೧೭ ಅಡಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.