ಅಕ್ಷರ ಮಾಲೆಯ ಮಾದರಿಯಲ್ಲಿ ಮತದಾನ ಜಾಗೃತಿ
ಬಾಗಲಕೋಟೆ : ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಂದಿಕೇಶ್ವರ ಗ್ರಾಮದ ಕೆರೆ ಅಭಿವೃದ್ದಿ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಕ್ಷರ ಮಾಲೆಯ ರೂಪದಲ್ಲಿ ಮತದಾನದ ಘೋಷ ವಾಕ್ಯಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಶುಕ್ರವಾರ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲ ಕಾರ್ಮಿಕರೊಂದಿಗೆ ಮತದಾನ ಜಾಗೃತಿಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಪ್ರಜಾಪ್ರಭುತ್ವದ ಸುಭದ್ರತೆಗಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಕೂಲಿ ಕಾರ್ಮಿಕರಿಗೆ ಕರೆ ನೀಡಿದರು.
ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವ ಹಕ್ಕನ್ನು ಪಡೆದಿದ್ದು, ಯಾವುದೇ ಒತ್ತಡಕ್ಕೆ ಮನಿಯದೇ ಮುಕ್ತವಾಗಿ, ನಿರ್ಭಯವಾಗಿ ಮತದಾನ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ, ಒತ್ತಡಕ್ಕೆ ಮಣಿಯದೇ ವಿವೇಕಚಿರಾಗಿ ತಮ ಚಲಾಯಿಸಲು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಮತದಾನ ಎಲ್ಲರ ಹಕ್ಕಾಗಿದ್ದು, ತಪ್ಪದೇ ಮತದಾನ ಮಾಡುವಂತೆ ನರೇಗಾ ಕೂಲಿ ಕಾರ್ಮಿಕರಿಗೆ ತಿಳಿಸಿದರು. ನಮ್ಮ ದೇಶ ಪ್ರೇಮವನ್ನು ಸಾಬೀತು ಪಡಿಸಲು ಗಡಿಗಳಲ್ಲಿ ಯುದ್ದವನ್ನೇ ಮಾಡಬೇಕಿಲ್ಲ. ಸಾವಿರುವ ಊರಿನಲ್ಲಿಯೇ ಸಮಾಜಕ್ಕೆ ಅಗತ್ಯವಿರುವ ಜಾಗೃತಿಯನ್ನು ಮೂಡಿಸುವುದು ದೇಶಪ್ರೇಮವಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಲು ಜಾಗೃತಿಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮತದಾನ ನಮ್ಮ ಜನ್ಮಸಿದ್ದ ಹಕ್ಕು ಎಲ್ಲರೂ ಎಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿಯ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರಿ, ಬಾದಾಮಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರ ಸಿಂಗ್, ಪಂಚಾಯತ ಅಭಿವೃದ್ದಿ ಅಧಿಕಾರಿ ಸವಿತಾ ಅಂಗಡಿ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬಾಕ್ಸ್ .
ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ
ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಂದಿಕೇಶ್ವರ ಗ್ರಾಮದಲ್ಲಿ ಕೆರೆ ಹೂಳೆತ್ತಿವ ಕಾರ್ಯದಲ್ಲಿ ತೊಡಗಿದ್ದ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಆರೋಗ್ಯದ ಕೆಲವು ಸಲಹೆಗಳನ್ನು ತಪ್ಪದೇ ಅನುಸರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ತಿಳಿಸಿದರು. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಓ.ಆರ್.ಎಸ್ ಪಾಕೀಟಗಳನ್ನು ವಿತರಿಸಲಾಯಿತು.