ಜೆಡಿಎಸ್ ಯುವನಾಯಕ ನಿಖಿಲ್ ನಾಳೆ ನಗರಕ್ಕೆ..

        ಜೆಡಿಎಸ್ ಯುವನಾಯಕ ನಿಖಿಲ್ ನಾಳೆ ನಗರಕ್ಕೆ..

 
    
ಬಾಗಲಕೋಟೆ: ಜಾತ್ಯತೀತ ಜನತಾದಳದ ಪಕ್ಷದ ಸದಸ್ಯ ನೋಂದಣಿ ಅಭಿಯಾನಕ್ಕೆ ಸೆ.೨೬ರಂದು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ತಿಳಿಸಿದರು. 
 ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೧.೩೦ಕ್ಕೆ ನವನಗರದ ಕಲಾಭವನದಲ್ಲಿ ಜರುಗುವ ಸಮಾರಂಭದಲ್ಲಿ ನಿಖಿಲ್ ಕುಮಾರಸ್ವಾಮಿಜಿ, ಟಿ.ಎ.ಶರಣವ, ಸುರೇಶ ಬಾಬು ಸೇರಿ ಪಕ್ಷದ ಗಣ್ಯರು ಭಾಗಿಯಾಗಲಿದ್ದಾರೆ ಎಂದರು. ಜಿಲ್ಲೆಯಲ್ಲಿ ೧೭೧೯ ಬೂತ್‌ಗಳಿದ್ದು, ಪ್ರತಿ ಬೂತ್‌ಗೆ ಕನಿಷ್ಠ ೧೫ ಜನರಂತೆ ಜಿಲ್ಲೆಯಲ್ಲಿ ೩೦ ಸಾವಿರ ಜನರನ್ನು ಸದಸ್ಯರನ್ನಾಗಿಸುವ ಗುರಿಯಿದೆ ಎಂದು ಹೇಳಿದರು. ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟಾರೆ ಜೆಡಿಎಸ್‌ಗೆ ಹೊಸ ಸ್ಪರ್ಶ ಸಿಗಲಿದ್ದು, ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. 
 ಜಿಲ್ಲೆಯ ಎಲ್ಲ ತಾಲೂಕಗಳಿಗೆ ಸಂಚರಿಸಿ ಈ ಬಗ್ಗೆ ಸಭೆಗಳನ್ನು ನಡೆಸಲಾಗಿದೆ. ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬೃಹತ್ ಸಮಾವೇಶದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 
 ಜಿಲ್ಲಾ ಕಾರ್ಯಾಧ್ಯಕ್ಷ ಸಲೀಂ ಮೋಮಿನ್, ತಾಲೂಕಾಧ್ಯಕ್ಷ ಕೃಷ್ಣಾ ಪಾಟೀಲ, ಯುವ ಮುಖಂಡ ಗೋಪಾಲ ಲಮಾಣಿ ಇತರರು ಇದ್ದರು.