ಒಳನಾಡು ಮೀನು ಕೃಷಿ ಉತ್ತೇಜನಕ್ಕೆ ಒತ್ತು
ರಾಜ್ಯದಲ್ಲಿರುವ ಸವಳು, ಜವಳು ಭೂಮಿಯನ್ನು ಗುರುತಿಸಿ ಅಭಿವೃದ್ಧಿ ಪಡಿಸಿ ಅಲ್ಲಿ ಮೀನು ಕೃಷಿ ಕೈಗೊಳ್ಳಲಾಗುವುದು. ಈ ಬಗ್ಗೆ ವಿಶೇಷ ಯೋಜನೆ ರಾಜ್ಯ ಸರ್ಕಾರ ಜಾರಿಗೊಳಿಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಾಗಲಕೋಟೆ: ರಾಜ್ಯದಲ್ಲಿರುವ ಸವಳು, ಜವಳು ಭೂಮಿಯನ್ನು ಗುರುತಿಸಿ ಅಭಿವೃದ್ಧಿ ಪಡಿಸಿ ಅಲ್ಲಿ ಮೀನು ಕೃಷಿ ಕೈಗೊಳ್ಳಲಾಗುವುದು. ಈ ಬಗ್ಗೆ ವಿಶೇಷ ಯೋಜನೆ ರಾಜ್ಯ ಸರ್ಕಾರ ಜಾರಿಗೊಳಿಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಮುಜರಾಯಿ, ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಸವಳು, ಜವಳು ಭೂಮಿಯನ್ನು ಗುರುತಿಸಿ ಆ ಭೂಮಿಯನ್ನು ಅಭಿವೃದ್ಧಿ ಪಡಿಸುವ ಕುರಿತು ಕ್ರೀಯಾ ಯೋಜನೆ ರೂಪಿಸಿ ಹಂತ ಹಂತವಾಗಿ ಆ ಭೂಮಿಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರಿಗೆ ನೀಡಿದಂತೆ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ ನೀಡುತ್ತಿದ್ದು, ಜಿಲ್ಲೆಯಲ್ಲಿರುವ ಪ್ರತಿಯೊಂದು ಮತಕ್ಷೇತ್ರಕ್ಕೆ 200 ಕಿಸಾನ್ ಕಾರ್ಡ್ ವಿತರಿಸಬೇಕು. ಈ ಕಿಸಾನ ಕಾರ್ಡ್ ಮೂಲಕ 3 ಲಕ್ಷಕ್ಕೆ ಮೀತಿಗೆ ಒಳಪಟ್ಟು ಶೂನ್ಯ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಕೆಲಸವಾಗಬೇಕು. ಅಲ್ಲದೆ ಜಿಲ್ಲೆಯ ಮೀನುಗಾರರಿಗೆ ಮೀನುಗಾರಿಕೆ ಕುರಿತು ಒಂದು ತಿಂಗಳ ಅವಧಿಯ ತರಬೇತಿ ನೀಡಿ ಜಿಲ್ಲೆಯ ಸವಳು, ಜವಳು ಭೂಮಿಯಲ್ಲಿ ಮೀನುಗಾರಿಕೆ ಕೃಷಿ ಕೈಗೊಳ್ಳಲು ಎಲ್ಲ ರೀತಿಯ ಕ್ರಮವಹಿಸಲು ಸೂಚಿಸಿದರು.
ಮೀನು ಕೃಷಿ ಮಾಡುವ ಮಹಿಳೆಯರಿಗೆ ಶೂನ್ಯ ದರದಲ್ಲಿ 50 ಸಾವಿರ ರೂ.ಗಳ ಸಾಲ ವಿತರಣೆ ನೀಡಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ 62 ಕೋಟಿ ರೂ.ಗಳ 23 ಸಾವಿರ ಮಹಿಳೆಯರಿಗೆ ಸಾಲ ವಿತರಿಸಲಾಗಿದೆ. ಅಲ್ಲದೆ 1 ಸಾವಿರ ಮಹಿಳೆಯರಿಗೆ ದ್ವಿಚಕ್ರ ವಾಹನ ಶೇ.50 ರಷ್ಟು ಸಬ್ಸಿಡಿಯಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ ಮಹಿಳಾ ಮೀನುಗಾರರಿಗೆ ಈ ಸೌಲಭ್ಯ ದೊರೆಯುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ ಕಿಸಾನ್ ಕಾರ್ಡ್‌ಗಾಗಿ ಬಂದ 400 ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಕಿಸಾನ್ ಕಾರ್ಡ್ ಇದ್ದವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಮೀನುಗಾರರಿಗೆ ಕಿಸಾನ್ ಕಾರ್ಡ್ ವಿತರಿಸುವ ಕೆಲಸವಾಗಬೇಕು. ಗ್ರಾಮ ಮಟ್ಟದಲ್ಲಿ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಮೀನು ಕೃಷಿಗೆ ಉತ್ತೇಜನ ನೀಡಬೇಕು. ಜಿಲ್ಲೆಯಲ್ಲಿ 150 ಕೆರೆಗಳಿದ್ದು, ನರೇಗಾದಡಿ ಅವುಗಳನ್ನು ಅಭಿವೃದ್ಧಿ ಪಡಿಸುವ ಕೆಲಸವಾಗಬೇಕು ಎಂದು ಜಿ.ಪಂ ಉಪ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 1163 ಸಿ ದರ್ಜೆಯ ಹಾಗೂ 3 ಬಿ ದರ್ಜೆಯ ದೇವಸ್ಥಾನಗಳಿದ್ದು, ಸಿ ದರ್ಜೆಯ ಪ್ರತಿಯೊಂದು ದೇವಸ್ಥಾನಗಳಿಗೆ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅವರ ಮೂಲಕ ಪ್ರತಿಯೊಂದು ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದೆಯೋ ಇಲ್ಲವೋ, ವ್ಯಾಪ್ತಿ ಎಷ್ಟು ಇದೆ. ಪೂಜೆ ಮಾಡುತ್ತಿರುವ ಅರ್ಚಕರು ಸೇರಿದಂತೆ ಇತರೆ ಮಾಹಿತಿಯನ್ನು ಒಂದು ವಾರದಲ್ಲಿ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆ ಮುಳುಗಡೆ ಪ್ರದೇಶವಾಗಿರುವದರಿಂದ ಅನೇಕ ದೇವಸ್ಥಾನಗಳು ಮುಗಳುಗಡೆಯಾಗಿದ್ದು, ಅವುಗಳನ್ನು ಪುನರ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೋಟ ಶ್ರೀನಿವಾಸ ದೇವಸ್ಥಾನಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮಕೈಗೊಳ್ಳಬೇಕು. ಅವುಗಳ ಆದಾಯವನ್ನು ಸಹ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಅಲ್ಲದೆ ಕರೊನಾ ಭೀತಿ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲಿ ಸಾಮೂಹಿಕ ಮದುವೆಯನ್ನು 10 ರಿಂದ 15 ಜೋಡಿಗಳಂತೆ ಬೇರೆ ಬೇರೆ ಸಮಯದಲ್ಲಿ ಮಾಡಬೇಕು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಎಚ್.ಬಾಂಗಿ, ನಿಜಶರಣ ಚೌಡಯ್ಯ ಉತ್ತರ ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುತುವರ್ಜಿ ವಹಿಸಿ
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಜಿಲ್ಲೆಯ ಮೀನುಗಾರರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಕೊರತೆ ಇದೆ. ಅವರಿಗೆ ಸೂಕ್ತ ತರಬೇತಿ ನೀಡಬೇಕು. ಕೇವಲ ಮೀನುಗಳನ್ನು ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ. ಮೀನುಗಾರರೆಂದು ಇಲಾಖೆಯಲ್ಲಿ ನೋಂದಣಿಯಾಗಿರುವದಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿತ್ತಿದ್ದು, ಅಂತಹ ಮೀನುಗಾರರನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸಬಲರಾಗುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಲು ತಿಳಿಸಿದರು.