ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವ ಯತ್ನ: ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ನಗರದ ಐತಿಹಾಸಿಕ ಶ್ರೀ ಕೊತ್ತಲೇಶ ದೇವಸ್ಥಾನದ ಹಿಂಬದಿ ಗೋಡೆಗೆ ಉದ್ದೇಶಪೂರ್ವಕವಾಗಿ ಅನ್ಯಕೋಮಿನ ವ್ಯಕ್ತಿಗಳು ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನೆಲ್ಲೆ ಸ್ಥಳೀಯರು ಹಾಗೂ ಹಿಂಜಾವೇ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ವಿಡಿಯೋ ದೊರೆತಾಗಿಯೂ ಕ್ರಮದ ಬಗ್ಗೆ ಪೊಲೀಸರು ಮಾತನಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂ.ಕ.ಸಮಾಚಾರ
ಬಾಗಲಕೋಟೆ:
ಬಾಗಲಕೋಟೆಯ ಆರಾಧ್ಯ ದೈವ, ಐತಿಹಾಸಿಕ ಕೊತ್ತಲೇಶ ದೇವಸ್ಥಾನದ ಹಿಂಭಾಗದ ಗೋಡೆಯನ್ನು ಉದ್ದೇಶಪೂರ್ವಕವಾಗಿ ಗಲೀಜು ಮಾಡಲಾಗುತ್ತಿದೆ ಎಂದು ದೂರಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಸ್ಥಳೀಯರು ಬುಧವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಕೊತ್ತಲೇಶ ದೇವಸ್ಥಾನದ ಹಿಂಭಾಗದ ಗೋಡೆಗೆ ಅನ್ಯಧರ್ಮಿಯರು ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹಲವು ಬಾರಿ ಮೂತ್ರ ವಿಸರ್ಜನೆ ಮಾಡದಂತೆ ಸೂಚಿಸಿದರು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರರು ಆರೋಪಸಿದರು.
ಕಿಲ್ಲಾ ಓಣಿಯಲ್ಲಿರುವ ಅಂಬಾಭವಾನಿ ದೇವಸ್ಥಾನದ ಎದುರು ಮಾನವ ಸರ್ಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನಮ್ಮ ಭಾವನೆಗಳಿಗೆ ಉದ್ದೇಶ ಪೂರ್ವಕವಾಗಿ ಘಾಸಿ ಮಾಡಲಾಗುತ್ತಿದೆ ಎಂದು ದೂರಿದರು.
ನಂತರ ಸ್ಥಳಕ್ಕೆ ಸಿಪಿಐ ನಾಗರೆಡ್ಡಿ ಅವರು ಆಗಮಿಸಿದಾಗ ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಅವರೊಂದಿಗೆ ವಾಗ್ವಾದ ಏರ್ಪಟ್ಟಿತು. ಘಟನೆ ಕುರಿತಾಗಿ ಕುಮಾರಸ್ವಾಮಿ ಹಿರೇಮಠ ವಿವರಿಸುತ್ತಿದ್ದಾಗ ಅಸಂಬದ್ಧವಾಗಿ ಮಾತನಾಡಬೇಡಿ ಎಂದು ಸಿಪಿಐ ಅವರು ಹೇಳಿದ್ದು ಅವರನ್ನು ಕೆರಳಿಸಿತು. ಎಲ್ಲ ಧರ್ಮಗಳು ಒಂದೇ, ನೋಡೋಣ ನಾಗರೆಡ್ಡಿ ಅವರು ಹೇಳಿದಾಗ ಗಣೇಶೋತ್ಸವ ಸಂದರ್ಭದಲ್ಲಿ ಅವರ ಗೋಡೆಗೆ ಗುಲಾಲು ತಾಕೀತು ಎಂದು ಯಾವುದೇ ದೂರು ಬಾರದಿದ್ದರೂ ಯುವಕರನ್ನು ಕರೆದೊಯ್ದು ದೂರು ದಾಖಲು ಮಾಡಿದ್ರಿ, ಈಗ ವಿಡಿಯೋ ಸಮೇತ ದಾಖಲೆ ಒದಗಿಸಿದಾಗಲೂ ಕ್ರಮದ ಬಗ್ಗೆ ಮಾತನಾಡುತ್ತಿಲ್ಲ. ಅದ್ಹೇಗೆ ಎಲ್ಲ ಧರ್ಮ ಒಂದೇ ಎಂದು ಭಾವಿಸಿದಂತಾಗುತ್ತದೆ ಎಂದು ಪ್ರಶ್ನಿಸಿದರು.
ಗುರುರಾಜ ಶೆಟ್ಟಿ, ಸುರೇಶ ಮಾಗಿ, ಪ್ರಕಾಶ ನಿರಂಜನ ಮತ್ತಿತರರು ನೇತೃತ್ವ ವಹಿಸಿದ್ದರು.