ಬಾಗಲಕೋಟೆ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಬಣ್ಣಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕಳೆದ ಬಾರಿಯೂ ಸಿದ್ದರಾಮಯ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳುವುದರ ಮೂಲಕ ಭರವಸೆಯ ಸರ್ಕಾರವಾಗಿ ಯಶಸ್ವಿ ಐದು ವರ್ಷ ಪೂರೈಸಿತ್ತು. ರಾಜ್ಯದಲ್ಲಿ ಈಗ ಮತ್ತೆ ಜನಪರವಾದ ಸರ್ಕಾರ ಅಧಿಕಾರಕ್ಕೆ ಮಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಣ್ಣಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಸಚಿವರುಗಳು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಸದಾ ಜನಸಾಮಾನ್ಯರ ಪರ ಎಂಬುದನ್ನು ತೋರಿಸಿದ್ದಾರೆ. ಸುಳ್ಳು ಹೇಳಿ ಅಧಿಕಾರ ಮಾಡಿಲ್ಲ. ಕೊಟ್ಟ ಮಾತಿಗೆ ಹಿಂದೆ ಸರಿಯುವದಿಲ್ಲ. ಬಡವರು, ಮಧ್ಯಮ ವರ್ಗಗಳ ಏಳಿಗೆ ಸಹಿಸದ ವಿರೋಧ ಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ನೋವಿನ ಸಂಗತಿ. ಇದೀಗ ಗ್ಯಾರಂಟಿ ಜಾರಿಗೊಳಿಸುವ ಮೂಲಕ ಮುಖ್ಯವಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಇಂಥ ಪಕ್ಷದಲ್ಲಿರುವುದು ಹೆಮ್ಮೆ ಮೂಡಿಸಿದೆ ಎಂದು ಹೇಳಿದರು.