ಜಿಪಂ ಸಭಾಂಗಣ ಉದ್ಘಾಟನೆ: ಡಿಸಿಎಂ ಕಾರಜೋಳ- ಬಾಯಕ್ಕ ಮೇಟಿ ಜಟಾಪಟಿ

ಜಿಪಂ ಸಭಾಂಗಣ ಉದ್ಘಾಟನೆ: ಡಿಸಿಎಂ ಕಾರಜೋಳ- ಬಾಯಕ್ಕ ಮೇಟಿ ಜಟಾಪಟಿ

ನಾಡನುಡಿ ನ್ಯೂಸ್:
ಬಾಗಲಕೋಟೆ
ಜಿಲ್ಲಾಡಳಿತ ಭವನ ಆವರಣದಲ್ಲಿ ನಿರ್ಮಿಸಲಾಗಿರುವ ಜಿಪಂ ಸಭಾಂಗಣ ಉದ್ಘಾಟನೆ ವೇಳೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಮಧ್ಯೆ ಜಟಾಪಟಿ ನಡೆಯಿತು.

ಭವನ ನಿರ್ಮಾಣಕ್ಕೆ ಜಿಪಂ ಸಭೆಯಲ್ಲಿ ನಿರ್ಣಯ ಕೈಗೊಂಡು ೪.೬೫ ಕೋಟಿ ರೂ.ಗಳನ್ನು ಒದಗಿಸಲಾಗಿತ್ತು ಆದರೆ ಉದ್ಘಾಟನೆ ಸಂದರ್ಭದಲ್ಲಿ ಜಿಪಂ ಸದಸ್ಯರುಗಳಿಗೆ ಪ್ರಾಮುಖ್ಯತೆ ನೀಡದೆ ಅವಮಾನಿಸಲಾಗಿದೆ ಎಂದು ಬಾಯಕ್ಕ ಮೇಟಿ ಅಸಮಾಧಾನ ಹೊರಹಾಕಿದರು.

ನಂತರ ಡಿಸಿಎಂ ಸಭಾಂಗಣ ಪ್ರವೇಶಿಸಿ ವೇದಿಕೆ ಏರಿದರೂ ಅಧ್ಯಕ್ಷೆ ಬಾಯಕ್ಕ ಹಾಗೂ ಸದಸ್ಯರು ಕಾರ್ಯಕ್ರಮ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಾಯಕ್ಕ ಮೇಟಿ, ಜಿಪಂ ಅನುದಾನದಲ್ಲೆ ಸಭಾಂಗಣ ನಿರ್ಮಾಣಗೊಂಡಿದೆ. ಆದರೆ ಇಂದು ಉದ್ಘಾಟನೆ ಸಂದರ್ಭದಲ್ಲಿ ನಮ್ಮನ್ನು ನಿರ್ಲಕ್ಷಿಸಲಾಗಿದೆ. ಸದಸ್ಯರು ಒಪ್ಪಿದರಷ್ಟೇ ಕಾರ್ಯಕ್ರಮಕ್ಕೆ ತೆರಳುವುದಾಗಿ ತಿಳಿಸಿದರು.

ನಂತರ ಬಿಜೆಪಿ ಸದಸ್ಯರಾದ ಹೂವಪ್ಪ ರಾಠೋಡ, ಶಶಿಕಾಂತ ಪಾಟೀಲ ಹಾಗೂ ಶಂಕರಗೌಡ ಪಾಟೀಲ ಅವರು ಇತರ ಸದಸ್ಯರನ್ನು ಮನವೊಲಿಸಿ ಕಾರ್ಯಕ್ರಮಕ್ಕೆ ಕರೆತಂದರು.

ನಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಅವರು , ಬಾಯಕ್ಕ ಅವರೇ ನಿಮ್ಮ ಅವಧಿ ಮುಗಿದ ನಂತರ ಉದ್ಘಾಟಿಸಬಹುದಿತ್ತು, ನಿಮ್ಮ ಹೆಸರು ಶಾಶ್ವತವಾಗಿ ಉಳಿಯಲಿ ಎಂದು ನಿಮ್ಮ ಅವಧಿಯಲ್ಲೇ ಉದ್ಘಾಟಿಸುತ್ತಿದ್ದೇವೆ ಎಂದು ಸಮಾಧಾನಪಡಿಸುವ ದಾಟಿಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಸನ್ಮಾನಿಸಲಾಯಿತು.