ಗೋವಿಂದ ಕಾರಜೋಳರಿಗೆ ಸ್ವಂತ ಕಾರೂ ಇಲ್ಲ..!
ತಂದೆ ಗಳಿಸಿದ ಆಸ್ತಿಗಿಂತಲೂ ಹೇಳಿಕೊಳ್ಳುವಷ್ಟು ಆಸ್ತಿ ಬೆಳವಣಿಗೆಯೂ ಆಗಿಲ್ಲ.. ಸ್ವಂತ ಬಳಕೆಗೆ ಒಂದೂ ಕಾರೂ ಇಲ್ಲ ಎಂದ ಸಚಿವ ಕಾರಜೋಳ ಅವರು ಸಲ್ಲಿಸಿರುವ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.
ಬಾಗಲಕೋಟೆ: ಅಪ್ಪ ಗಳಿಸಿದಕ್ಕಿಂತ ಹೇಳಿಕೊಳ್ಳುವಷ್ಟು ಹೆಚ್ಚಿನ ಆಸ್ತಿಗಳಿಕೆಗೂ ಹೋಗಿಲ್ಲ. ಸಾಲದ ತಂಟೆಗೂ ಹೋಗಿಲ್ಲ. ಇದು ಗೋವಿಂದ ಕಾರಜೋಳ ಅವರು ಸಲ್ಲಿಸಿರುವ ಆಸ್ತಿ ವಿವರ..!
ಕಳೆದ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಅವರು ಸಲ್ಲಿಸಿದ ಆಸ್ತಿ ವಿವರಕ್ಕೆ ಹೋಲಿಕೆ ಮಾಡಿದರೂ ಈ ಬಾರಿ ಆಸ್ತಿ ಪ್ರಮಾಣ ಹೆಚ್ಚಳಗೊಂಡಿಲ್ಲ. ಕಾರಜೋಳ ಅವರು ೪೧.೬೫ ಲಕ್ಷ ರೂ.ಗಳ ಆದಾಯವನ್ನು ತೋರಿಸಿದ್ದು, ತಮ್ಮ ಬಳಿಯಲ್ಲಿ ೫ ಲಕ್ಷ ರೂ., ಪತ್ನಿ ಬಳಿ ೨ ಲಕ್ಷ ರೂ. ನಗದು ಹೊಂದಿದ್ದಾರೆ.
ಬ್ಯಾoಕ್‌ನಲ್ಲಿ ಕಾರಜೋಳ ಅವರ ಹೆಸರಿನಲ್ಲಿ ೧.೭೭ ಕೋಟಿ ರೂ.ಗಳ ಠೇವಣಿ ಹೊಂದಿದ್ದು, ಪತ್ನಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ೧.೪೪ ಲಕ್ಷ ರೂ.ಗಳಷ್ಟು ಠೇವಣಿ ಹೊಂದಿದ್ದಾರೆ. ಕಾರಜೋಳ ಅವರು ಮುಧೋಳ ತಾಲೂಕು ರನ್ನ ಬೆಳಗಲಿಯ ರನ್ನ ಸಕ್ಕರೆ ಕಾರ್ಖಾನೆಯಲ್ಲಿ ೫ ಸಾವಿರ ರೂ.ಗಳ ಶೇರುಗಳನ್ನು ಹೊಂದಿದ್ದಾರೆ. ಇನ್ನು ೧.೨೩ ಕೋಟಿ ರೂ. ಸ್ಥಿರಾಸ್ತಿ ಗೋವಿಂದ ಕಾರಜೋಳ ಹೆಸರಲ್ಲಿ, ಪತ್ನಿ ಹೆಸರಿನಲ್ಲಿ ೨೬ ಲಕ್ಷ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ.
೨೦೧೮ರಲ್ಲಿ ಗೋವಿಂದ ಕಾರಜೋಲ ಅವರು ೩೯.೧೪ ಲಕ್ಷ ರೂ.ಗಳ ಚರಾಸ್ತಿ ಹಾಗೂ ಪತ್ನಿ ೪೩.೦೭ ಲಕ್ಷ ರೂ.ಗಳ ಚರಾಸ್ತಿ ಪತ್ನಿ ಹೆಸರಿನಲ್ಲಿತ್ತು. ಗೋವಿಂದ ಕಾರಜೋಲ ಅವರ ಹೆಸರಿನಲ್ಲಿ ೮೧ ಲಕ್ಷ ರೂ.ಗಳ ಸ್ಥಿರಾಸ್ತಿ ಮತ್ತು ಪತ್ನಿಯ ಹೆಸರಿನಲ್ಲಿ ೧೦ ಲಕ್ಷ ರೂ.ಗಳ ಸ್ಥಿರಾಸ್ತಿ ಇತ್ತು. ಇನ್ನು ಕಾರಜೋಳ ಅವರ ಹೆಸರಿನಲ್ಲಿ ಸ್ವಂತ ಕಾರು ಸಹ ಇಲ್ಲ.