ವೈದ್ಯರಿಂದ ಸೋಂಕಿತ ವೈದ್ಯರ ಚಿಕಿತ್ಸೆಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ
*ತ್ವರಿತ ಪರೀಕ್ಷೆಯಿಂದ ನಿಯಂತ್ರಣ ಸಾಧ್ಯ * ತಜ್ಞರ ಅಭಿಮತ
ನಾಡನುಡಿ ವಿಶೇಷ
ಬಾಗಲಕೋಟೆ:
ಕೋವಿಡ್ ವಾರಿರ‍್ಸ್ ಆಗಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಸೋಂಕು ತಗುಲಿದಲ್ಲಿ ಚಿಕಿತ್ಸೆ ಒದಗಿಸುವುದಕ್ಕಾಗಿ ಪ್ರತ್ಯೇಕ ಆಸ್ಪತ್ರೆಯೊಂದು ಸಜ್ಜುಗೊಂಡಿದೆ. ನವನಗರದ ಬಸ್ ನಿಲ್ದಾಣಬಳಿಯಿರುವ ಡಾ.ದಡ್ಡೇನ್ನವರ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ವೈದ್ಯರೇ ಪರಿವರ್ತಿಸಿದ್ದು, ವಿಶೇಷವಾಗಿದೆ.
ಈ ಆಸ್ಪತ್ರೆಯಲ್ಲಿ ವೈದ್ಯರು, ಅವರ ಕುಟುಂಬದವರು, ವೈದ್ಯಕೀಯ ಕ್ಷೇತ್ರದ ಇತರರಿಗೆ ಚಿಕಿತ್ಸೆ ಒದಗಿಸುವುದು ಪ್ರಥಮ ಆದ್ಯತೆ ಆಗಲಿದ್ದು, ಅದರ ನಂತರವೂ ಹಾಸಿಗೆಗಳು ಲಭ್ಯವಿದ್ದಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ಲಭ್ಯವಾಗಲಿದೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆ ಲಭ್ಯವಾಗುವುದು ಅನುಮಾನವಿರುವುದರಿಂದ ಕೊರೊನಾ ವಾರಿರ‍್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಚಿಕಿತ್ಸೆ ಲಭ್ಯವಾಗದೆ ತೊಂದರೆಯುAಟಾಗಬಾರದು ಈ ಹಿನ್ನೆಲೆಯಲ್ಲಿ ನಗರದ ವೈದ್ಯರು ಒಗ್ಗೂಡಿ ಈ ಆಸ್ಪತ್ರೆಯನ್ನು ಪರಿವರ್ತಿಸಲಾಗಿದೆ ಎಂದು ನಗರದ ಹಿರಿಯ ತಜ್ಞವೈದ್ಯ ಡಾ.ಸುಭಾಸ್ ಪಾಟೀಲ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವೈದ್ಯರ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆಗಳಾಗಿವೆ. ಬಾಗಲಕೋಟೆಯಲ್ಲೂ ಅಂಥ ಆಸ್ಪತ್ರೆ ಸ್ಥಾಪನೆಗೆ ಐಎಂಎ ಸದಸ್ಯರು ಯೋಚಿಸಿದ್ದರು. ಡಾ.ಎಂ.ಎಸ್.ದಡ್ಡೇನ್ನವರ ಅವರು ನವನಗರದ ತಮ್ಮ ಸುಸಜ್ಜಿತ ಆಸ್ಪತ್ರೆಯನ್ನು ಒದಗಿಸಿದ್ದಾರೆ. ಸದ್ಯಕ್ಕೆ ೨೫ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಾದರೆ ಇನ್ನೂ ಹದಿನೈದು ಬೆಡ್‌ಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸಾಮಾನ್ಯ ಚಿಕಿತ್ಸೆಯಿಂದ ವೆಂಟಿಲೇಟರ್ ಘಟಕದವರೆಗೆ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾಡಳಿತ ಅನುಮೋದನೆ ನೀಡಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗಂಟಲು ಪರೀಕ್ಷೆಗೆ ಒಳಗಾಗಿ ಸೋಂಕಿನ ಪ್ರಮಾಣ ಪತ್ರವುಳ್ಳ ವೈದ್ಯರಿಗೆ ಮೊದಲ ಆದ್ಯತೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ತುರ್ತು ಸೇವೆಯಲ್ಲಿ ಇರುವ ಸಾಮಾನ್ಯ ರೋಗಿಗಳು ಬಂದರೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರ ನಿಗದಿಪಡಿಸುವ ದರದಲ್ಲಿ ಸೇವೆ ಒದಗಿಸಲಾಗುತ್ತದೆ. ಐಎಂಎ ಬಳಗದಿಂದಲೇ ತಜ್ಞ,ವೈದ್ಯರು ಇಲ್ಲಿ ಸೇವೆ ಒದಗಿಸಲಿದ್ದಾರೆ ಎಂದು ಅವರು ಹೇಳಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಅಗತ್ಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಶಂಕಿತರ ಗಂಟಲು ಮಾದರಿ ಪರೀಕ್ಷೆಗೆ ನೀಡಿದಾಗ ತ್ವರಿತವಾಗಿ ಲ್ಯಾಬ್‌ನಿಂದ ವರದಿ ಬಂದಷ್ಟು ತುರ್ತು ಚಿಕಿತ್ಸೆ ಸಾಧ್ಯವಾಗುತ್ತದೆ. ವಿಳಂಬವಾದಷ್ಟು ಸಮಸ್ಯೆ ಆಗುತ್ತದೆ. ಮಾದರಿ ಪರೀಕ್ಷೆ ನೀಡಿದವ ನಾಲ್ಕಾರು ದಿನಗಳ ಕಾಲ ಕಾಯ್ದು, ವರದಿ ಬರುವ ಹೊತ್ತಿಗೆ ಸಾಕಷ್ಟು ಜನರ ಸಂಪರ್ಕದಲ್ಲಿ ಬಂದಿರುತ್ತಾರೆ. ವಹಿವಾಟು ನಡೆಸಿರುತ್ತಾರೆ. ಇದರಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತದೆ. ಒಂದೇ ದಿನದಲ್ಲಿ ವರದಿ ಬಂದರೆ ಇದನ್ನು ನಿಯಂತ್ರಿಸಲು ಸಾಧ್ಯ.
ಡಾ. ಸುಭಾಸ್ ಪಾಟೀಲ, ಹಿರಿಯ ವೈದ್ಯ
ಮಾಸ್ಕ್ ಧರಿಸುವಲ್ಲಿ ಯಾವುದೇ ವಿಳಂಬ ಸಲ್ಲದು ಊಟ, ಉಪಹಾರ, ನೀರು ಕುಡಿಯುವ ಸಂದರ್ಭ ಬಿಟ್ಟರೆ ಯಾವ ಕಾರಣಕ್ಕೂ ಮಾಸ್ಕ್ ತೆರೆಯಬಾರದು. ಇದೊಂದನ್ನು ಮಾಡಿದರೂ ಸಹ ನಿಯಂತ್ರಣ ಸಾಧ್ಯವಿದೆ. ಆದರೆ ಜನ ಮೈಮರೆತಿದ್ದಾರೆ. ಈ ಪ್ರವೃತ್ತಿ ಸಲ್ಲದು. ಆಸ್ಪತ್ರೆಗೆ ಬರಲು ಸಹ ವಿಳಂಬವಾದಷ್ಟು ಚಿಕಿತ್ಸೆಗೆ ತೊಂದರೆ ಆಗುತ್ತದೆ.
ಡಾ.ಸಂದೀಪ ಹುಯಿಲಗೋಳ, ಕಿಡ್ನಿ ತಜ್ಞ
ಬಾಗಲಕೋಟೆ ವೈದ್ಯರ ಅಪೇಕ್ಷೆಯಂತೆ ಪ್ರತ್ಯೇಕ ಕೋವಿಡ್ ಚಿಕಿತ್ಸೆ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಸರ್ಕಾರದ ಮಾನದಂಡ, ನಿಗದಿಪಡಿಸುವ ದರವನ್ನು ಅನ್ವಯಿಸಲಾಗಿದೆ. ಕೋವಿಡ್ ದೃಢಪಟ್ಟವರಿಗೆ ಮಾತ್ರ ಚಿಕಿತ್ಸೆಗೆ ಅವಕಾಶ ಗುಣಮುಖವಾದ ನಂತರವೂ ಸಹ ಜಿಲ್ಲಾಸ್ಪತ್ರೆಯಿಂದ ನೆಗಟಿವ್ ವರದಿ ಬಂದಮೇಲೆಯೇ ಬಿಡುಗಡೆ ಮಾಡಲಾಗುತ್ತದೆ.
ಡಾ.ಸುಜಯ್ ಹೆರೆಂಜಲ್, ಐಎಂಎ ಕಾರ್ಯದರ್ಶಿ
ವೈದ್ಯರಿಗಾಗಿ ಆರಂಭಿಸಲಾಗಿರುವ ಆಸ್ಪತ್ರೆ ಸುಸಜ್ಜಿತವಾಗಿದ್ದು, ಎಲ್ಲ ಸೌಕರ್ಯಗಳನ್ನು ನೀಡಲಾಗಿದೆ. ಈಗಾಗಲೇ ಇಬ್ಬರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕ ಸೇವೆಯಲ್ಲಿ ಬಾಗಲಕೋಟೆ ವೈದ್ಯರು ಮುಂಚೂಣಿಯಲ್ಲಿದ್ದು, ಸೇವೆ ಒದಗಿಸಲಿದ್ದಾರೆ.
ಡಾ.ವಿಕಾಸ್ ದಡ್ಡೇನ್ನವರ, ವೈದ್ಯ