ಕೈ,ಕಮಲದಲ್ಲಿ ತೀವ್ರಗೊಂಡ ಡಿಸಿಸಿ ಬ್ಯಾಂಕ್ ಗದ್ದುಗೆ ಗುದ್ದಾಟ

* ನ.೧೭ಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಾಧ್ಯತೆ * ಎರಡೂ ಪಕ್ಷದಲ್ಲಿ ತೀವ್ರಗೊಂಡಿರುವ ಚಟುವಟಿಕೆ  * ಕಡ್ಲಿಮಟ್ಟಿ, ಜನಾಲಿ ನಡೆಯತ್ತ ಪಕ್ಷಗಳ ಚಿತ್ತ     

    ಕೈ,ಕಮಲದಲ್ಲಿ ತೀವ್ರಗೊಂಡ ಡಿಸಿಸಿ ಬ್ಯಾಂಕ್ ಗದ್ದುಗೆ ಗುದ್ದಾಟ

ನಾಡನುಡಿ ವಿಶೇಷ 
ಬಾಗಲಕೋಟೆ :
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದೆಯನ್ನು ಶತಾಯಗತಾಯ ಉಳಿಸಿಕೊಳ್ಳಲು ಕಾಂಗ್ರೆಸ್ ತನ್ನ ಪ್ರಯತ್ನವನ್ನು ಆರಂಭಿಸಿದೆ. ಅದಕ್ಕಾಗಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲವು ಸಾಧಿಸಿರುವ ಇಬ್ಬರು ನಿರ್ದೇಶಕರನ್ನು ತನ್ನತ್ತ ಸೆಳೆಯುವ ಯತ್ನದಲ್ಲಿದೆ. 


 ನೇಕಾರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಕಣಕ್ಕಿಳಿದಿದ್ದರು. ಈ ಪೈಕಿ ಹಿಂದಿನ ಅವಧಿಯಲ್ಲಿ ನಿರ್ದೇಶಕರಾಗಿದ್ದ ಡಾ.ಎಂ.ಎಸ್.ದಡ್ಡೇನವರ ಪ್ರಯತ್ನಿಸಿ ವಿಫಲವಾಗಿದ್ದರು. ಆದರೆ ಅದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮುರುಗೇಶ ಕಡ್ಲಿಮಟ್ಟಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಈಗ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡು ಅಧ್ಯಕ್ಷ ಗಾದೆಗೆ ಅವರ ನೆರವು ಪಡೆಯಲು ಪಕ್ಷ ಮುಂದಾಗಿದೆ. ಬಾದಾಮಿ ಪಿಕೆಪಿಎಸ್ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಆಗಿ ಗೆಲವು ಸಾಧಿಸಿದ ಕುಮಾರಗೌಡ ಜನಾಲಿ ಅವರಿಗೂ ಕಾಂಗ್ರೆಸ್ ಬಲೆ ಬೀಸಿದೆ ಎನ್ನಲಾಗಿದೆ. 


 ಕಡ್ಲಿಮಟ್ಟಿ ಅವರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ತೀವ್ರವಾಗಿರುವಾಗಲೇ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅವರು ಕಮತಗಿ ಪಟ್ಟಣಕ್ಕೆ ಭೇಟಿ ನೀಡಿ ಮುರುಗೇಶ ಕಡ್ಲಿಮಟ್ಟಿ ಅವರನ್ನು ಸನ್ಮಾನಿಸಿ ಬಂದಿದ್ದಾರೆ. ಮೇಲ್ನೊಟಕ್ಕೆ ಈ ಭೇಟಿ ಸೌಹಾರ್ದಯುತ ಎಂದು ಹೇಳಲಾದರೂ ಇದರಲ್ಲಿ ಹಲವು ಲೆಕ್ಕಾಚಾರಗಳಿವೆ ಎಂಬ ಮಾತು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿದೆ. 


 ಸದ್ಯ ಕಾಂಗ್ರೆಸ್ ಡಿಸಿಸಿ ಬ್ಯಾಂಕ್‌ನಲ್ಲಿ ೬ ಸದಸ್ಯ ಬಲವನ್ನು ಹೊಂದಿದ್ದು, ಇನ್ನೆರಡು ಸ್ಥಾನಗಳು ಬೇಕಿದೆ. ಅದಕ್ಕಾಗಿ ಜನಾಲಿ ಹಾಗೂ ಕಡ್ಲಿಮಟ್ಟಿ ಅವರನ್ನು ಸೆಳೆಯಲು ಮುಂದಾಗಿದೆ. 


 ಇನ್ನು ಬಿಜೆಪಿ ೫ ಸದಸ್ಯ ಬಲವನ್ನು ಹೊಂದಿದ್ದು, ಅಪೇಕ್ಸ್ ಬ್ಯಾಂಕ್ ಮೂಲಕ ಈಗಾಗಲೇ ಕಣದಿಂದ ನಿವೃತ್ತರಾದ ಬಸವರಾಜ್ ಪಾಟೀಲ ಅವರನ್ನು ಡಿಸಿಸಿ ಬ್ಯಾಂಕ್‌ಗೆ ನಾಮಕರಣಗೊಳಿಸಲಾಗಿದೆ. ಬಸವರಾಜ್ ಪಾಟೀಲ ಅವರು ರಬಕವಿ-ಬನಹಟ್ಟಿ ಪಿಕೆಪಿಎಸ್ ಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ ವಿರುದ್ಧ ಸ್ಪರ್ಧಿಸಿ ಚುನಾವಣೆಯ ಹಿಂದಿನ ದಿನ ಕಣದಿಂದ ನಿವೃತ್ತರಾಗಿದ್ದರು.

ಇವರಲ್ಲದೆ ಸಹಕಾರ ಇಲಾಖೆ ಉಪನಿಬಂಧಕರಿಗೆ ಒಂದು ಮತವಿರಲಿದ್ದು, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ ಅವರು ಸಹ ಬಿಜೆಪಿ ಪರವಾಗಿಯೇ ಮತದಾನ ಮಾಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ ೮ ಜನ ಯಾವ ಕಡೆಗೆ ಲಭ್ಯವಾಗುತ್ತಾರೋ ಅವರಿಗೆ ಗೆಲವು ನಿಶ್ಚಿತವಾಗಿದೆ.


 ಸದ್ಯದ ಕಣ ಚಿತ್ರಣ ನೋಡಿದರೆ ಐದು ನಿರ್ದೇಶಕರ ಆಯ್ಕೆ ಜತೆಗೆ ಬಸವರಾಜ ಪಾಟೀಲ ಹಾಗೂ ಸಹಕಾರ ಇಲಾಖೆ ನಿಬಂಧಕರ ಮತ ಸೇರಿ ಬಿಜೆಪಿ ಬಳಿ ಏಳು ಮತಗಳಿದ್ದು, ಇನ್ನೊಂದು ಮತದ ಅವಶ್ಯಕತೆ ಇದೆ. ಹೀಗಾಗಿ ಬಿಜೆಪಿಯಲ್ಲೇ ಗುರುತಿಸಿಕೊಂಡಿದ್ದ ಕುಮಾರಗೌಡ ಜನಾಲಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಭರವಸೆಯನ್ನು ನೀಡಿ ಬಿಜೆಪಿ ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನದಲ್ಲಿದೆ ಎನ್ನಲಾಗಿದೆ. 


 ಇದಲ್ಲದೇ ಕಾಂಗ್ರೆಸ್ ಕೂಡ ನಿರಂತರವಾಗಿ ಅಧ್ಯಕ್ಷ ಸ್ಥಾನದ ಗದ್ದುಗೆಯನ್ನು ತನ್ನ ಬಳಿ ಉಳಿಸಿಕೊಳ್ಳು ಯತ್ನಿಸುತ್ತಿದ್ದು, ನಿಕಟಪೂರ್ವ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರು ಕುಮಾರಗೌಡ ಜನಾಲಿ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಆದರೆ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಏಕಾಏಕಿ ಫೀಲ್ಡ್ಗಿಳಿದು ಅಧ್ಯಕ್ಷ ಪಟ್ಟಕ್ಕೆ ಬೇಡಿಕೆ ಇಟ್ಟಿರುವುದು ಈಗ ಪಕ್ಷದ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಬಾದಾಮಿಗೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಂಗಲಾಚಿ ಬೇಡಿಕೊಂಡ ಕಾಶಪ್ಪನವರ ಕಳೆದ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಈಗ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ, ನೀವು ಒಂದು ಮಾತು ಹೇಳಿದರೆ ಖಂಡಿತ ಆಗುತ್ತದೆ ಎಂದು ಅವರು ಕಾಲಿಗೆ ಬಿದ್ದು ಕೇಳಿಕೊಂಡಿದ್ದಾರೆ. 
 ಖಚಿತ ಭರವಸೆ ನೀಡದ ಸಿದ್ದರಾಮಯ್ಯ ಸಹಕಾರಿ ಕ್ಷೇತ್ರ ವಿಶೇಷವಾಗಿ ಸ್ಥಳೀಯ ರಾಜಕಾರಣದಲ್ಲಿ ನಾನು ಕೈ ಆಡಿಸುವುದಿಲ್ಲ. ಎಸ್.ಆರ್.ಪಾಟೀಲ, ಸರನಾಯಕ ಅದನೆಲ್ಲ ನೋಡಿಕೊಳ್ಳುತ್ತಾರೆ ಆದರೆ ನನ್ನ ಬೆಂಬಲ ಸದಾ ನಿನಗೆ ಇದ್ದೆ ಇರುತ್ತದೆ ಎಂದು ಅವರು ಹೇಳಿದ್ದಾರೆ. 


 ಬಲ್ಲ ಮೂಲಗಳ ಪ್ರಕಾರ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸೋತಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದಕ್ಕೆ ವಿವರಣೆ ನೀಡಿದ ಸ್ಥಳೀಯ ಮುಖಂಡರು  ಬಿಜೆಪಿ ಅಭ್ಯರ್ಥಿ ಜತೆ ಪ್ರವಾಸಕ್ಕೆ ಹೋದವರೇ ಅವರ ಬೆಂಬಲಕ್ಕೆ ಬಂದಿಲ್ಲ ಎಂದು ಸಮಜಾಯಿಷಿ ನೀಡಿದಾಗ ಹೌದಾ ಎಂದು ಸಿದ್ದು ಆಶ್ಚರ್ಯ ವ್ಯಕ್ತಪಡಿಸಿದರು. ಕಾರ್ಯಕರ್ತರಿಗೆ ಸಿಗಬೇಕಾದ ಅವಕಾಶದಲ್ಲಿ ನಾಯಕರೇ ಚುನಾವಣೆಗೆ ಸ್ಪರ್ಧಿಸಿರುವುದಕ್ಕೆ ಅವರು ಸಹಮತ ವ್ಯಕ್ತಪಡಿಸಿಲ್ಲ ಎಂದು ಅವರ ಆಪ್ತವಲಯ ಹೇಳಿವೆ. 


 ಸದ್ಯಕ್ಕೆ ೬ ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಇಬ್ಬರು ನಿರ್ದೇಶಕರ ಬೆಂಬಲಗಳಿಸಲು ಕಾರ್ಯತಂತ್ರ ರೂಪಿಸಬೇಕಾಗಿದ್ದು, ಎಷ್ಟು ಫಲಕಾರಿ ಆಗುತ್ತದೆ ಎಂಬುದನ್ನು ಕಾಯ್ದುನೋಡಬೇಕಾಗಿದೆ. 

                              VISIT: www.nadanudi.com for more news