ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಿ : ತಿಮ್ಮಾಪೂರ

ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಿ : ತಿಮ್ಮಾಪೂರ
ಬಾಗಲಕೋಟೆ: ವಿದ್ಯುತ್ ಪೂರೈಕೆಯಲ್ಲಿ ಆಗುವ ತೊಂದರೆಗಳನ್ನು ಸರಿಪಡಿಸುವ ಮೂಲಕ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರ ಪ್ರದೇಶಗಳಲ್ಲಿ ಅನಗತ್ಯವಾಗಿ ಬೀದಿ ದೀಪ ಉರಿಸುವುದು ತಡೆಯುವ ಮೂಲಕ ವಿದ್ಯುತ್ ನಿರ್ವಹಣೆ ಮಾಡಿ ರೈತರ ವಿದ್ಯುತ್ ಸಮಸ್ಯೆ ನಿವಾರಿಸುವ ಕಾರ್ಯವಾಗಬೇಕು ಎಂದರು.  
ನಾಡಿಗೆ ಅನ್ನ ನೀಡುವರೇ ರೈತರಾಗಿದ್ದು, ಅವರ ಬೆಳೆಗಳಿಗೆ ಸಮರ್ಪಕವಾದ ವಿದ್ಯುತ್ ವಿತರಿಸದಿದ್ದಲ್ಲಿ ಬೆಳೆ ಹಾಳಾಗುತ್ತದೆ. ಇದರಿಂದ ರೈತ ತೊಂದರೆಗೆ ಒಳಗಾಗುತ್ತಾನೆ. ಇದನ್ನು ಮನಗಂಡು ಸಮರ್ಪಕ ನಿರ್ವಹಣೆ ಮಾಡುವ ಮೂಲಕ ರೈತರಿಗೆ ವಿದ್ಯುತ್ ಪೂರೈಸಲು ಮಂದಾಗಬೇಕು.  ಜಿಲ್ಲೆಯ ವಜ್ರಮಟ್ಟಿ ಮತ್ತು ಮಹಾಲಿಂಗಪೂರ ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂಬ ದೂರುಗಳು ಅಲ್ಲಿಯ ರೈತರಿಂದ ಕೇಳಿ ಬರುತ್ತಿದ್ದು, ಆದ್ಯತೆಯ ಮೇರೆಗೆ ಇಲ್ಲಿನ ರೈತರಿಗೆ ವಿದ್ಯುತ್ ವಿತರಿಸುವ ಕಾರ್ಯ ಆಗಬೇಕು ಎಂದರು. 
ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ ಕೈಗಾರಿಕೆಗಳಿಗೆ ನೂರಕ್ಕೆ ನೂರರಷ್ಟು ವಿದ್ಯುತ್ ನೀಡಲಾಗುತ್ತದೆ. ಅದೇ ರೀತಿ ರೈತರಿಗೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಕ್ರಮವಹಿಸಬೇಕು. ಎಲ್ಲರಿಗೂ ನೀಡುವಲ್ಲಿ ತೊಂದರೆಯಾಗುತ್ತದೆ ಎಂದಾದಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಿ ರೈತರಿಗೆ ಸಮರ್ಪಕ ವಿದ್ಯುತ್ ವಿತರಿಸಬೇಕು ಎಂದು ಹೇಳಿದರು. ಯಳ್ಳಿಗುತ್ತಿ ಗ್ರಾಮ, ಛಬ್ಬಿ ಕ್ರಾಸ್ ಹತ್ತಿರ ೪೦ ಮನೆಗಳಿಗೆ, ಹಳೇ ಸಾಲಗುಂದಿ, ಇನಾಂ ಹುಲ್ಲಿಕೇರಿ ಪ್ಲಾಟ್‌ನಲ್ಲಿರುವ ಮನೆಗಳಿಗೆ ನಿರಂತರ ಜ್ಯೋತಿ ತುರ್ತಾಗಿ ಒದಗಿಸುವಂತೆ ಸೂಚಿಸಿದರು. 
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಷನ ಸಭೆಗೆ ಮಾಹಿತಿ ನೀಡುತ್ತಾ, ಬಾಗಲಕೋಟೆ ಜಿಲ್ಲೆಯ ಐಪಿ ಮಾರ್ಗಗಳಿಗೆ ಸರಕಾರದ ನಿರ್ದೇಶನದಂತೆ ೭ ಗಂಟೆ ೩ ಫೇಸ್ ವಿದ್ಯುತ್ ಪೂರೈಸಲು ಪ್ರತಿ ದಿನ ಸರಿ ಸುಮಾರು ೬೬೮ ಮೇಗಾ ವ್ಯಾಟ್/೧೧ ಮಿ.ಯು ವಿದ್ಯುತ್ ಅವಶ್ಯಕತೆ ಇರುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ೨೯೫ ರಿಂದ ೩೦೦ ಮೇಗಾ ವ್ಯಾಟ್/೬ ರಿಂದ ೭ ಮಿಲಿಯನ್ ಯುನಿಟ್‌ಗಳಷ್ಟು ವಿದ್ಯುತ ಹಂಚಿಕೆ ಮಾಡಲಾಗುತ್ತಿದೆ ಎಂದರು.
ಮಳೆಯ ಕೊರತೆ, ಜಲ ವಿದ್ಯುತ್, ಪವನ್ ಮತ್ತು ಸೋಲಾರ ವಿದ್ಯುತ್À  ಉತ್ಪಾದನೆ ಕುಂಟಿತಗೊAಡಿದೆ. ಹಾಗೂ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ದುರಸ್ತಿ ಕಾಮಗಾರಿಗಳಿಂದಾಗಿ ಮತ್ತು ವಿದ್ಯುತ್ ಖರೀದಿಸಲು ರಾಜ್ಯ, ದೇಶದಲ್ಲಿ ವಿದ್ಯುತ್ ಅಲಭ್ಯತೆಯಿಂದಾಗಿ ೭ ಗಂಟೆ ವಿದ್ಯುತ್‌ನ್ನು ನೀರಾವರಿ ಪಂಪ ಸೆಟ್‌ಗಳಿಗೆ ಪೂರೈಸಲು ಕಷ್ಟಸಾಧ್ಯವಾಗುತ್ತಿದೆ ಎಂದರು. 
ಜಿಲ್ಲೆಯಲ್ಲಿ ೨೨೦ ಕೆವಿ ವಿದ್ಯುತ್ ಕೇಂದ್ರಗಳು ೩, ೧೦ ಕೆವಿ ಕೇಂದ್ರಗಳು ೪೯ ಹಾಗೂ ೩೩ ಕೆವಿ ಕೇಂದ್ರಗಳು ೨೪ ಸೇರಿ ಒಟ್ಟು ೭೬ ವಿದ್ಯುತ್ ಕೇಂದ್ರಗಳಿವೆ. ಕಲಾದಗಿ, ಬಾದಾಮಿ, ಕುಳಗೇರಿ ಕ್ರಾಸ್ ಲೋಡ್ ಶೆಡ್ಡಿಂಗ್ ಸಮಸ್ಯೆ ಇದೆ. ಇದನ್ನು ಪರಿಹರಿಸಲು ಉದಗಟ್ಟಿ, ಶರದಾಳ ಮತ್ತು ತುಳಸಿಗೇರಿಯಲ್ಲಿ ೧೧೦ ಕೆವಿ ಹೊಸ ಸ್ಟೇಷನ್ ಸ್ಥಾಪನೆಗೆ ಟೆಂಡರ್‌ಆಗಿದ್ದು, ಇನ್ನು ೯ ತಿಂಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಅಲ್ಲದೇ ಬೀಳಗಿ ತಾಲೂಕಿನ ಬಸವ ಹಂಚಿನಾಳ ಬದಲಿಗೆ ಬಾಡಗಂಡಿಯಲ್ಲಿ ಸ್ಟೇಷನ್ ಪ್ರಾರಂಭಿಸಲು ಕ್ರಮಕವಹಿಸಲಾಗುವುದು ಎಂದು ತಿಳಿಸಿದರು. 
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಕೆಪಿಟಿಸಿಎಲ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಕಾಶಿನಾಥ ಹಿರೇಮಠ, ಹೆಸ್ಕಾಂ ಬೆಳಗಾವಿ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಪಿ.ಪ್ರಕಾಶ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ.ಕೆ.ಗೋಟ್ಯಾಳ, ಬಾಗಲಕೋಟೆ ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಲಿಂ ಅಹಮ್ಮದ ಸೇರಿದಂತೆ ಇತರರು ಇದ್ದರು.