ಮದುವೆ ಸಮಾರಂಭ ಆಯೋಜನೆಗೆ ಬಾಗಲಕೋಟೆಯಲ್ಲೂ ಟಫ್ ರೂಲ್ಸ್

ಮದುವೆ ಸಮಾರಂಭ ಆಯೋಜನೆಗೆ ಬಾಗಲಕೋಟೆಯಲ್ಲೂ ಟಫ್ ರೂಲ್ಸ್

ನಾಡನುಡಿ ನ್ಯೂಸ್
ಬಾಗಲಕೋಟೆ:
ನಗರದಲ್ಲಿ ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರದಂತೆ ನಗರಸಭೆಯಿಂದ ನಿರ್ಬಂಧ ವಿಧಿಸಲಾಗಿದ್ದು, ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.
   ಶನಿವಾರ ಮಂಗಲ ಕಾರ್ಯಾಲಯಗಳ ಮಾಲೀಕರೊಂದಿಗರ ಸಭೆ ನಡೆಸಿದ ಪೌರಾಯುಕ್ತ ಮುನಿಶಾಮಪ್ಪ ಅವರು, ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ೧೦೦ ಜನ ಮೀರದಂತೆ ಕ್ರಮವಹಿಸಬೇಕು. ಇದು ಉಲ್ಲಂಘನೆಯಾದರೆ ಮದುವೆ ಆಯೋಜಕರ ಮೇಲೆ ಪ್ರಕರಣ ದಾಖಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮದುವೆಗಳಲ್ಲಿ ಎಸಿ ಬಳಕೆಗೆ ಅವಕಾಶವಿರುವುದಿಲ್ಲ.ಮದುವೆ ಮಂಟಪಗಳ ಪ್ರವೇಶದಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ, ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇದ್ದವರು ಮದುವೆಯಲ್ಲಿ ಭಾಗವಹಿಸದಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇರಬೇಕು, ೧ ಮೀಟರ್ ಸಾಮಾಜಿಕ ಅಂತರ ಪಾಲನೆ ಆಗಬೇಕು, ಸಾರ್ವಜನಿಕವಾಗಿ ಉಗಿಯಬಾರದು, ಹ್ಯಾಂಡವಾಶ ವ್ಯವಸ್ಥೆ ಇರಬೇಕು, ಮದ್ಯಪಾನ, ಗುಟ್ಕಾ, ತಂಬಾಕು ಸೇವನೆ ಕಡ್ಡಾಯವಾಗಿ ನಿರ್ಬಂಧಿಸಿರಬೇಕು.ಮದುವೆಗೆ ಆಗಮಿಸುವವರು ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಂಡಿರಬೇಕು ಎಂದು ಸೂಚನೆ ನೀಡಿದರು.

ಮದುವೆ ಸಮಾರಂಭಕ್ಕೆ ಬಂದವರಲ್ಲಿ ಕೊರೊನಾ ಸೋಂಕು ಕಂಡು ಬಂದಲ್ಲಿ ಎಫ್ ಐಆರ್ ದಾಖಲಿಸಲಾಗುವುದು. ಸರ್ಕಾರದ ಯಾವುದೇ ಸೂಚನೆಗಳು ಬಂದರೂ  ಪಾಲಿಸಲೇಬೇಕು ಇಲ್ಲವಾದಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು