ವಕ್ಫ್ ಮೇಲೆ ಕಣ್ಣು ಹಾಕಿದರೆ ಪರಿಣಾಮ ಗಂಭೀರ: ಎಸ್‌ಡಿಪಿಐ 

ವಕ್ಫ್ ಮೇಲೆ ಕಣ್ಣು ಹಾಕಿದರೆ ಪರಿಣಾಮ ಗಂಭೀರ: ಎಸ್‌ಡಿಪಿಐ 


ಬಾಗಲಕೋಟೆ:  ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 
 ನವನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮೆರವಣಿಗೆ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
 ಬಿಜೆಪಿಯು ಮುಸ್ಲಿಂ ಸಮುದಾಯದ ಆಸ್ತಿಗಳಿಗೆ ಸರಿಪಡಿಸಲಾಗದ ಹಾನಿ ಉಂಟು ಮಾಡಲು ಯತ್ನಿಸುತ್ತಿದೆ.  ಸುಧಾರಣೆಯ ನೆಪದಲ್ಲಿ ವಕ್ಫ್ ವ್ಯವಸ್ಥೆಯಿಂದ ಸೌಲಭ್ಯ, ಆಸ್ತಿಯನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ. ಇದು ವಕ್ಫ್ ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಬಿಜೆಪಿಯು ವಕ್ಫ್ಗಳ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ದೂರಿದರು.
 ಮುಸ್ಲಿಮರಿಗೆ ಮಾರಕವಾಗಿರುವ ಈ ಕಾಯಿದೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಇದನ್ನು ರದ್ದುಪಡಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ವಕ್ಫ್ ಮಂಡಳಿಯಲ್ಲಿ ಬದಲಾವಣೆ ತರಲು ಎನ್‌ಡಿಎ ನೇತೃತ್ವದ ಸರ್ಕಾರ ಕರಾಳವಾದ ಕಾಯ್ದೆ ಜಾರಿಗೊಳಿಸುತ್ತಿದೆ. ಈ ಹಿಂದೆ ವಕ್ಫ್ ಮಂಡಳಿ ಆಸ್ತಿ ಕಬಳಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ಇತ್ತು. ಈಗ ಅದನ್ನು ರದ್ದುಪಡಿಸಲಾಗುತ್ತಿದೆ. ಯಾರಾದರೂ ವಕ್ಫ್ ಮಂಡಳಿ ಆಸ್ತಿಗೆ ಕನ್ನ ಹಾಕಲು ಯತ್ನಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
  ಪ್ರತಿಭಟನೆಯಲ್ಲಿ ಖಾಸಿಂ ಗೊಳಸಂಗಿ, ಉಮರ್ ಕಾಲೆಖಾನ್, ಮಹೆಬೂಬ ಹಡಗಲಿ, ರಫೀಕ ಉಮರಿ, ಅಹ್ಮದ ಕಲಾದಗಿ, ಕಾಶೀಮ ಕಟ್ನಳ್ಳಿ, ಅಲ್ತಾಫ ಮದರಿ, ಮೋಯಿನ್ ಕಲಾದಗಿ, ಸದ್ದಾಂ ಮುಲ್ಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.