ಲವ್ ಜಿಹಾದ್ ತಡೆಗೆ ಶ್ರೀರಾಮಸೇನೆಯಿಂದ ಸಹಾಯವಾಣಿ
ಬಾಗಲಕೋಟೆ: ಲವ್ ಜೆಹಾದ್ ಜಾಲಕ್ಕೆ ಬಲಿಯಾಗುತ್ತಿರುವ ಹಿಂದೂ ಯುವತಿಯರು, ಅವರ ಕುಟುಂಬದ ರಕ್ಷಣೆಗಾಗಿ ಶ್ರೀರಾಮಸೇನೆ ರಾಜ್ಯಾದ್ಯಂತ ಸಹಾಯವಣಾಣಿಯನ್ನು ಜಾರಿಗೆ ತಂದಿದೆ ಎಂದು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಗಾವಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜೆಹಾದ್ ಪ್ರಕರಣಗಳಲ್ಲಿ ಪಾಲಕರಿಗೆ ದೂರು ದಾಖಲಿಸಲು ಸಾಧ್ಯವಾಗುತ್ತಿಲ್ಲ. ದೂರು ನೀಡಲು ತೆರಳಿದರೆ ಪೊಲೀಸರು ಸಹಕಾರ ನೀಡುವುದಿಲ್ಲ ಹೀಗಾಗಿಯೇ ಅಂಥ ಕುಟುಂಬಗಳ ರಕ್ಷಣೆಗೆ ಶ್ರೀರಾಮಸೇನೆ ಧಾವಿಸುತ್ತಿದೆ ಎಮದು ಹೇಳಿದರು.
ಉತ್ತರ ಭಾರತದ ರಾಜ್ಯಗಳಲ್ಲಿ ೨೦೨೨-೨೩ರಲ್ಲಿ ೧೫೩ ಹಿಂದು ಯುವತಿಯರ ಹತ್ಯೆಗಳು ನಡೆದಿವೆ. ಅದರಲ್ಲಿ ಶೇ. ೨೭.೫ ರಷ್ಟು ಅಪ್ರಾಪ್ತರ ಹತ್ಯೆಗಳು ನಡೆದಿವೆ. ಕಾರಣ ದೇಶದಲ್ಲಿ ಮಹಿಳೆಯರು ಹಾಗೂ ಯುವತಿಯರ ರಕ್ಷಣೆಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಪ್ರತ್ಯೇಕ ಪೊಲೀಸ್ ಸಿಬ್ಬಂದಿ ನೇಮಿಸುವ ಮೂಲಕ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸೇನೆಯ ರಾಜ್ಯ ಕಾರ್ಯದರ್ಶಿ ರಾಜು ಕಾನಪ್ಪನವರ ಮಾತನಾಡಿ, ೧೪ ರಿಂದ ೧೬ ವಯಸ್ಸಿನ ಯುವತಿಯರೇ ಲವ್ ಜಿಹಾದ್‌ಗೆ ಒಳಗಾಗುತ್ತಿದ್ದಾರೆ. ಹದಿ ಹರೆಯದ ವಯಸ್ಸಿನಲ್ಲಿ ಅವರಿಗೆ ಲವ್ ಜಿಹಾದ್ ಬಗ್ಗೆ ಕಲ್ಪನೆ ಬರುವಕ್ಕಿಂತ ಮುಂಚೆಯೇ ಅವರು ಇದಕ್ಕೆ ಬಲಿಯಾಗುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ಮುಸ್ಲಿಂ ಮುಖಂಡರು ಹಾಗೂ ರಾಜಕೀಯ ಮುಖಂಡರು ಸಂತ್ರಸ್ತೆಯ ನೆರವಿಗೆ ಬರುವುದಿಲ್ಲ ಎಂದರು.
ನಮ್ಮ ಹೆಲ್ಪ್ ಲೈನ್ ನಂಬರ್‌ನ ಕೇಂದ್ರ ಸ್ಥಾನ ಹುಬ್ಬಳ್ಳಿ. ರಾಜ್ಯದ ವಿವಿಧ ಮೂಲೆಗಳಿಂದ ಬರುವ ಕರೆಗಳನ್ನು ಕರೆ ಮಾಡಿದ ಸ್ಥಳೀಯ ಸೇನೆಯ ನಾಯಕರಿಗೆ ತಿಳಿಸಲಾಗುತ್ತದೆ. ಅವರು ಸಂತ್ರಸ್ತೆಗೆ ಬೇಕಿರುವ ಎಲ್ಲ ರೀತಿಯ ಸಹಾಯಗಳನ್ನು ಮಾಡುತ್ತಾರೆ ಎಂದು ತಿಳಿಸಿದರು.
ಬೀಳಗಿ ತಾಲೂಕಿನ ಮುಂಚಗನೂರ ಗ್ರಾಮದ ರಾಯಲಿಂಗೇಶ್ವರ ಸಂಸ್ಥಾನ ಮಠದ ಮಾತಾ ವಚನಶ್ರೀ ಮಾತನಾಡಿ, ಹಿಂದುಗಳಲ್ಲಿನ ಅಸಹಾಯಕತೆ ಹಾಗೂ ಒಗ್ಗಟ್ಟಿನ ಕೊರತೆಯಿಂದ ನಮ್ಮ ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಲವ್ ಜಿಹಾದ್‌ಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಲು ನಾವು ಒಗ್ಗಟ್ಟಾಗಬೇಕಿದೆ. ಇಲ್ಲದಿದ್ದರೆ ನಮ್ಮ ಯುವತಿಯರ ಜೀವನ ಕೊಲೆಯಲ್ಲಿ ಅಂತ್ಯವಾಗುತ್ತದೆ ಎಂದು ಎಚ್ಚರಿಸಿದರು.
ಹಳೇ ವಿರಾಪುರದ ವಿಶ್ವಕರ್ಮ ಮಠದ ಮಲ್ಲಿಕಾರ್ಜುನ ಅಜ್ಜಾರ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶಹಾಜೀ ಪವಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಬಾಲರಡ್ಡಿ, ಮುಖಂಡ ಭೀಮಣ್ಣ ದಾಸನ್ನವರ ಇತರರಿದ್ದರು. ದೂರು ನೀಡಲು ಸಹಾಯವಾಣಿ ಸಂಖ್ಯೆ ೯೦೯೦೪-೪೩೪೪೪ ಗೆ ಸಂಪರ್ಕಿಸಬಹುದು ಎಂದು ಹೇಳಿದರು.