ವಂಚನೆ ಸಂತ್ರಸ್ತ ಠೇವಣಿದಾರರಿಂದ "ಜೈಲ್ ಭರೋ"
ಬಾಗಲಕೋಟೆ:
ಸಾರ್ವಜನಿಕರು ಇರಿಸಿದ್ದ ಹಣ ವಂಚಿಸಿರುವ ವಿವಿಧ ಹೂಡಿಕೆ ಕಂಪನಿಗಳಿoದ ಹಣ ಹಿಂದಿರುಗಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಪರಿವಾರದಿಂದ ಬುಧವಾರ ಜೈಲ್ ಭರೋ ಚಳವಳಿ ನಡೆಸಲಾಯಿತು.
ಪಿಎಸಿಎಲ್, ಸಾಯಿಪ್ರಸಾದ, ಸಮೃದ್ಧಜೀವನ, ಗರಿಮಾ, ಹಿಂದೂಸ್ಥಾನ, ಅಗ್ರಿಗೋಲ್ಡ್, ಈ ಸ್ಟೋರ್ ಇಂಡಿಯಾ ಸೇರಿದಂತೆ ಹಲವು ಹೂಡಿಕೆ ಕಂಪನಿಗಳು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿದ್ದು, ನಂತರದಲ್ಲಿ ಅವುಗಳನ್ನು ಮರುಪಾವತಿಸಿಲ್ಲ ಎಂದು ದೂರಿ ಸೆ.೧ರಿಂದಲೇ ಜಿಲ್ಲಾಡಳಿತ ಭವನದ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈಗ ಅದರ ಭಾಗವಾಗಿ ಬುಧವಾರ ಜೈಲ್ ಭರೋ ಚಳವಳಿ ಕೈಗೊಳ್ಳಲಾಯಿತು.
ಮುಖಂಡ ನಾಗೇಶ ಗೋಳಿಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ೨೦೦-೨೫೦ಕ್ಕೂ ಹೆಚ್ಚು ಹೂಡಿಕೆ ಕಂಪನಿಗಳು ಜನರಿಗೆ ವಂಚಿಸಿವೆ. ಅವುಗಳಿಗೆ ಸಂಬoಧಿಸಿದoತೆ ಸರ್ಕಾರ ಮೌನ ವಹಿಸುವ ಬದಲಾಗಿ ಬಡ್ಸ್ ಕಾಯ್ದೆ ೨೦೧೯ರ ಪ್ರಕಾರ ಹಣಹಿಂದಿರುಗಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು, ಪುರುಷರು ಜಿಲ್ಲಾಡಳಿತ ಪ್ರವೇಶಿಸಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ರೈತ ಮುಖಂಡ ಸುಭಾಸ ಶಿರಬೂರ ಸೇರಿ ಹಲವರು ನೇತೃತ್ವ ವಹಿಸಿದ್ದರು. ಧರಣಿ ಸತ್ಯಾಗ್ರಹ ಮುಂದವರಿಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ.