ಕೋಟೆನಗರಿಯ ಚಹಾ ಅಂಗಡಿಯಲ್ಲಿ ಕಾಣಸಿಕ್ಕ ಕರಾವಳಿ ನಾಯಕ ಯಾರು..?
ಬಾಗಲಕೋಟೆ:ಕರಾವಳಿ ಭಾಗದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಅತ್ಯಂತ ಸಾಮಾನ್ಯರಂತೆ ರಸ್ತೆ ಬದಿಯಲ್ಲಿ ಚಹಾ ಕುಡಿದಿದ್ದಾರೆ. ಅವರನ್ನು ಕೆಲವರು ಗುರುತಿಸಿದ ನಂತರ ಜನ ಸೆಲ್ಫಿಗೆ ಮುಗಿಬಿದ್ದಿರುವ ಪ್ರಸಂಗ ನಡೆದಿದೆ.
ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಕೋಟಾ ಶ್ರೀನಿವಾಸ್ ಪೂಜಾರಿ ವಿದ್ಯಾಗಿರಿಯ ಬ್ರಹ್ಮಲಿಂಗೇಶ್ವರ ಚಹಾ ಅಂಗಡಿಯಲ್ಲಿ ಸಾಮಾನ್ಯರಂತೆ ಕುಳಿತಾಗ ಕೆಲ ಶಿಕ್ಷಕರು ಅವರನ್ನು ಗುರುತಿಸಿ ಮಾತನಾಡಿಸಿದ್ದಾರೆ. ರಾಜಕೀಯದಲ್ಲಿ ಚಿಕ್ಕದೊಂದು ಸ್ಥಾನ ಸಿಕ್ಕ ತಕ್ಷಣ ಮರಿಪುಢಾರಿಗಳು, ಅಭಿಮಾನಿ ಬಳಗ ಕಟ್ಟಿಕೊಂಡು ಓಡಾಡುವ ಇಂದಿನ ದಿನಮಾನದಲ್ಲಿ ಮಾಜಿ ಸಚಿವರಾಗಿದ್ದು ಕೋಟಾ ಶ್ರೀನಿವಾಸ ಪೂಜಾರಿ ತೋರುತ್ತಿರುವ ಸರಳತೆಗೆ ಜನ ಫಿದಾ ಆಗಿದ್ದಾರೆ. ಅವರ ಚಹಾ ಕುಡಿಯಲು ಸಾಮಾನ್ಯರಂತೆ ಕುಳಿತ ಭಂಗಿ ನಿಮ್ಮನ್ನೂ ಆಕರ್ಷಿಸದೆ ಇರಲಾರದು.
ಸೋಮವಾರ ಬೆಳಗ್ಗೆ ಬಾಗಲಕೋಟೆ ಮೂಲಕ ಕಲಬುರಗಿಗೆ ಹೊರಟಿದ್ದ ಅವರು ಸಿಬಿಎಸ್ಇ ಶಾಲಾ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತ ಕೂತಿದ್ದರು ಆಗ ಅವರನ್ನು ಅನೇಕರು ಗುರುತಿಸಿಲ್ಲ.
ಅದೇ ಸಮಯಕ್ಕೆ ಮುಖ್ಯಶಿಕ್ಷಕ ನಾಗರಾಜ ದೇಶಪಾಂಡೆ ಮತ್ತವರ ಸ್ನೇಹಿತರು ಕೋಟಾ ಅವರನ್ನು ಗುರುತಿಸಿದ್ದು, ಫೋಟೋ ತೆಗೆಸಿಕೊಂಡಿದ್ದಾರೆ.ನಂತರ ಇತರರು ಸಹ ಸೆಲ್ಫಿಗೆ ಮುಗಿಬಿದ್ದಿದ್ದಾರೆ.